ಮಂಗಳೂರು: ಕೋಳಿ ಅಂಕದ ಕುರಿತು ಈಗಾಗಲೇ ದೀರ್ಘ ಚರ್ಚೆ ನಡೆದಿದ್ದು, ಪೊಲೀಸ್ ಇಲಾಖೆ ಕೋಳಿ ಅಂಕದಲ್ಲಿ ಬೆಟ್ಟಿಂಗ್ ನಡೆಯುತ್ತಿರುವುದಾಗಿ ಅಭಿಪ್ರಾಯಪಟ್ಟಿದೆ . ಬೆಟ್ಟಿಂಗ್ ನಡೆಯುತ್ತಿದ್ದರೆ ಅದನ್ನು ನಿಲ್ಲಿಸಬೇಕು. ಕೋಳಿ ಅಂಕವನ್ನು ಮುಂದುವರಿಸಬೇಕಾದರೆ ಸಂಬಂಧಿಸಿದ ಎಲ್ಲರೊಂದಿಗೆ ಚರ್ಚೆ ನಡೆಸಿ, ಸಂಸ್ಕೃತಿ ಮತ್ತು ಪರಂಪರೆಗೆ ತಕ್ಕಂತೆ ಸ್ಪಷ್ಟ ನಿಯಮಾವಳಿ ರೂಪಿಸಬೇಕು. ಈ ಸಂಬಂಧ ಕಾನೂನು ಸಚಿವರು ಹಾಗೂ ಸಂಬಂಧಿಸಿದ ಇಲಾಖೆಗಳು ಮಾತುಕತೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಈ ಕುರಿತು ಉಸ್ತುವಾರಿ ಸಚಿವರಿಗೆ ಸಲಹೆ ನೀಡಿರುವುದಾಗಿ ಸ್ಪೀಕರ್ ಯು.ಟಿ. ಖಾದರ್ ತಿಳಿದಿದ್ದಾರೆ.

ಜ.31ರಿಂದ ಫೆ.1ರವರೆಗೆ ನಡೆಯಲಿರುವ ಆಯುಷ್ ಹಬ್ಬದ ಕುರಿತು ಸರ್ಕ್ಯೂಟ್ ಹೌಸ್‌ನಲ್ಲಿ ಮಾಹಿತಿ ನೀಡಿದ ಬಳಿಕ ಮಾಧ್ಯಮದರು ಕೋಳಿ ಅಂಕಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಬೆಳವಣಿಗೆಗಳ ಕುರಿತು ಪ್ರಶ್ನಿಸಿದಾಗ ಯು.ಟಿ. ಖಾದರ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಕೋಗಿಲು ಲೇಔಟ್‌ನಲ್ಲಿ ಮನೆ ತೆರವು ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಸರ್ಕಾರ ಇದೆ, ಸಚಿವರಿದ್ದಾರೆ. ಸ್ಪೀಕರ್ ಆಗಿ ನಾನು ಈ ವಿಚಾರದಲ್ಲಿ ಮಾತನಾಡುವುದಿಲ್ಲ. ಅಂತಿಮವಾಗಿ ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಳ್ಳುತ್ತಾರೆ” ಎಂದರು.
ಬಳ್ಳಾರಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ನಡೆದ ಅಹಿತಕರ ಘಟನೆ ಹಾಗೂ ಚಾರ್ಜ್ ತೆಗೆದುಕೊಂಡ ಒಂದೇ ದಿನದಲ್ಲಿ ಎಸ್ ಅಮಾನತು ಆದ ಕುರಿತಂತೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ಸಿನಿಮೀಯ ಶೈಲಿಯ ಕಚ್ಚಾಟ, ದ್ವೇಷ ರಾಜಕಾರಣ ಸರಿಯಲ್ಲ. ಇಂತಹ ಕೃತ್ಯಗಳಿಂದಾಗಿಯೇ ಜನರಿಗೆ ಜನಪ್ರತಿನಿಧಿಗಳ ಮೇಲಿನ ಗೌರವ ಕಡಿಮೆಯಾಗಿದೆ. ಸದನದ ಒಳಗಾಗಲಿ ಹೊರಗಾಗಲಿ ಏಕವಚನ ಬಳಕೆ, ಬೆದರಿಕೆ ನೀಡುವುದು ಸರಿಯಲ್ಲ ಎಂದರಲ್ಲದೆ, ಎಸ್‌ಪಿ ಸಸ್ಪೆಂಡ್ ಮಾಡಿದ ವಿಚಾರ ಇಲಾಖೆಯ ತೀರ್ಮಾನ ಎಂದರು.

ತಾವು ಸಿಎಂ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ತುರ್ತು ಇಲ್ಲ. ಮತ್ತೆ ನಾಲ್ಕು ಬಾರಿ ಗೆಲ್ಲಿಸಿದ ಬಳಿಕ ಜನ ತೀರ್ಮಾನ ಮಾಡುತ್ತಾರೆ. ಸ್ಪೀಕರ್ ಆದ ಮೇಲೆ ರಾಜಕೀಯ ಚಟುವಟಿಕೆಗಳಿಂದ ದೂರವಾಗಿದ್ದೇನೆ ಎಂದರು.

ದ್ವೇಷ ಭಾಷಣದ ವಿರುದ್ಧ ಕೈಗೊಳ್ಳಲಾದ ಕ್ರಮಗಳ ಕುರಿತು ವ್ಯಕ್ತವಾದ ವಿರೋಧದ ಬಗ್ಗೆ ಉತ್ತರಿಸಿದ ಅವರು, ದೇಶ ಬಲಿಷ್ಠವಾಗಬೇಕಾದರೆ ದ್ವೇಷ ಸಾರುವುದು ಸರಿಯಲ್ಲ. ನಾವು ಆಡುವ ಮಾತು ಮತ್ತು ಮಾಡುವ ಕೆಲಸಗಳು ಸಮಾಜಕ್ಕೆ ಪೂರಕವಾಗಿದ್ದರೆ ದೇಶ ಉದ್ಧಾರವಾಗುತ್ತದೆ. ಬಾಯಿಗೆ ಬಂದಂತೆ ಮಾತನಾಡುವುದರಿಂದಲೇ ಅನಾವಶ್ಯಕ ಸಮಸ್ಯೆಗಳು ಉಂಟಾಗುತ್ತವೆ. ಮಾತನಾಡಿ ವಿವಾದ ಸೃಷ್ಟಿ ಮಾಡುವುದು ಹಾಗೂ ನಂತರ ಅದನ್ನು ಬಗೆಹರಿಸಲು ಸಮಯ ವ್ಯರ್ಥವಾಗುತ್ತದೆ. ಇದರಿಂದ ದೇಶ ಉದ್ಧಾರ ಆಗುವುದಿಲ್ಲ. ಮಸೂದೆಯಲ್ಲಿ ಯಾವುದಾದರೂ ಲೋಪಗಳಿದ್ದರೆ ಅವನ್ನು ಬರವಣಿಗೆಯ ಮೂಲಕ ಸಲ್ಲಿಸಬೇಕು. ಶಾಂತಿ ಮತ್ತು ನೆಮ್ಮದಿಯೇ ಎಲ್ಲರಿಗೂ ಮುಖ್ಯ ಎಂದು ಖಾದರ್ ಹೇಳಿದರು.
