ರೋಗ ಬರದಂತೆ ತಡೆಗಟ್ಟುವ ಸಾಮರ್ಥ್ಯ ಆಯುಷ್‌‌ ಹೊಂದಿದೆ: ಯು.ಟಿ. ಖಾದರ್: ಜ.31ರಿಂದ ಫೆ.1ರವರೆಗೆ ಮಂಗಳೂರಿನಲ್ಲಿ ಆಯುಷ್‌ ಹಬ್ಬ

ಮಂಗಳೂರು: ಆಯುಷ್ ಇಲಾಖೆ, ಜಿಲ್ಲಾಡಳಿತದ ಸಹಕಾರದೊಂದಿಗೆ ಹಾಗೂ ದಕ್ಷಿಣ ಕನ್ನಡ–ಉಡುಪಿ ಜಿಲ್ಲೆಗಳ ಆಯುಷ್ ಆಸ್ಪತ್ರೆಗಳು, ಕಾಲೇಜುಗಳು ಮತ್ತು ವೃತ್ತಿನಿರತ ಆಯುಷ್ ವೈದ್ಯರ ಜಂಟಿ ಆಶ್ರಯದಲ್ಲಿ ನಗರದ ಟಿ.ಎಂ.ಎ. ಪೈ ಕನ್ವೆನ್ಷನ್ ಹಾಲ್‌ನಲ್ಲಿ  ಜನವರಿ 31 ಮತ್ತು ಫೆಬ್ರವರಿ 1ರಂದು ‘ಆಯುಷ್ ಹಬ್ಬ 2026’ ಭವ್ಯವಾಗಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಫರೀದ್ ತಿಳಿಸಿದ್ದಾರೆ.

ಅವರು ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಆಯುಷ್ ಹಬ್ಬದ ಆಮಂತ್ರಣ ಪತ್ರಿಕೆ ಹಾಗೂ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.

ಆಯುರ್ವೇದ, ಯೋಗ–ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿ ಸೇರಿದಂತೆ ಆಯುಷ್ ಪದ್ಧತಿಗಳು ಭಾರತದ ಪಾರಂಪರಿಕ ಚಿಕಿತ್ಸಾ ವಿಧಾನಗಳಾಗಿದ್ದು, ನಮ್ಮ ಋಷಿ–ಮುನಿಗಳು ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಈ ಚಿಕಿತ್ಸಾ ಪದ್ಧತಿಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಆಯುಷ್ ಹಬ್ಬ ಆಯೋಜಿಸಲಾಗಿದೆ ಎಂದರು.

ಆಯುಷ್ ಪದ್ಧತಿಗಳಿಂದ ಹಲವಾರು ಆರೋಗ್ಯ ಲಾಭಗಳಿದ್ದರೂ ಜನರಿಗೆ ಅದರ ಸಮಗ್ರ ಪರಿಚಯ ಇನ್ನೂ ತಲುಪಿಲ್ಲ. ಇದಕ್ಕೆ ಸಂಬಂಧಿಸಿದ ಎಲ್ಲಾ ಆಯುಷ್ ವೈದ್ಯರಿಗೆ, ಸಂಸ್ಥೆಗಳಿಗೆ ಹಾಗೂ ಕಾಲೇಜುಗಳಿಗೆ ಈ ಹಬ್ಬದಲ್ಲಿ ಭಾಗವಹಿಸುವ ಅವಕಾಶವಿದೆ. ಮಕ್ಕಳಿಂದಲೇ ಆಯುಷ್ ಪದ್ಧತಿಗಳ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶವೂ ಇದೆ. ಇದು ಜನರಲ್ಲಿ ಆಯುಷ್ ಕುರಿತು ಜಾಗೃತಿ ಮೂಡಿಸುವ ಹಬ್ಬವಾಗಿದ್ದು, ರೋಗ ಬರದಂತೆ ಮುಂಚಿತವಾಗಿ ತಡೆಗಟ್ಟುವ ಸಾಮರ್ಥ್ಯ ಆಯುಷ್‌ಗೆ ಇದೆ ಎಂದು ಖಾದರ್ ಹೇಳಿದರು.

ಈ ಆಯುಷ್ ಹಬ್ಬದಲ್ಲಿ 5ರಿಂದ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ಸಾಧ್ಯತೆ ಇದೆ. ವಿವಿಧ ಕಾಲೇಜುಗಳು ಮತ್ತು ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯುವ ಈ ಹಬ್ಬದಲ್ಲಿ ಆಯುಷ್ ಕ್ಯಾಂಪ್‌ಗೆ ಆಗಮಿಸುವವರಿಗೆ ಅಗತ್ಯ ಪರೀಕ್ಷೆಗಳು ನಡೆಸಲಾಗುತ್ತದೆ. ಆಯುಷ್ ಹಬ್ಬವನ್ನು ಜಿಲ್ಲೆಗೆ ಮಾದರಿಯನ್ನಾಗಿ ರೂಪಿಸಿ, ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರೆಯುವಂತೆ ಮಾಡುವ ಗುರಿ ಹೊಂದಲಾಗಿದೆ ಎಂದರು.

ಈ ಸಂದರ್ಭದಲ್ಲಿ ಆಯುಷ್ ಇಲಾಖೆಯ ಡಾ. ಆಶಾ ಜ್ಯೋತಿ ರೈ ಮಾತನಾಡಿ, ಆಯುಷ್ ಹಬ್ಬದ ಮುಖ್ಯ ಉದ್ದೇಶ ಆಯುರ್ವೇದ, ಆಯುಷ್ ಹಬ್ಬದ ಅಂಗವಾಗಿ ವೈಜ್ಞಾನಿಕ ಅಧಿವೇಶನಗಳು ನಡೆಯಲಿದ್ದು, ಆಧುನಿಕ ತಂತ್ರಜ್ಞಾನಗಳನ್ನು ಆಯುಷ್ ಪದ್ಧತಿಗಳೊಂದಿಗೆ ಅಳವಡಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಎರಡು ದಿನಗಳ ಕಾರ್ಯಕ್ರಮದಲ್ಲಿ ಜಿಲ್ಲೆಯ ಖ್ಯಾತ ಆಯುಷ್ ವೈದ್ಯರಿಂದ ಉಚಿತ ಸ್ವಾಸ್ಥ್ಯ ಶಿಬಿರ, ಮುಂಚಿತ ನೋಂದಣಿಯೊಂದಿಗೆ ಉಚಿತ ನಾಡೀ ಪರೀಕ್ಷೆ, ಹಿರಿಯ ನಾಗರಿಕರು ಮತ್ತು ಮಹಿಳೆಯರಿಗಾಗಿ ವಿಶೇಷ ಆರೋಗ್ಯ ಸೇವೆಗಳು, ಹೃದಯ ಆರೋಗ್ಯ ಸಂಭ್ರಮ, ಒತ್ತಡ ನಿವಾರಣೆಗೆ ಯೋಗ ಹಾಗೂ ಪ್ರಕೃತಿ ಚಿಕಿತ್ಸಾ ತರಬೇತಿ, ಆರೋಗ್ಯ ಆಹಾರ ಹಬ್ಬ, ಸ್ವದೇಶೀ ಸಾವಯವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಅಲ್ಲದೆ ಆಯುಷ್ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗಾಗಿ ವೈಜ್ಞಾನಿಕ ಅಧಿವೇಶನಗಳು, ವೆಲ್‌ನೆಸ್ ಎಕ್ಸ್‌ಪೋ, ಔಷಧ ಪ್ರದರ್ಶನ ಮಳಿಗೆಗಳು, ಆಯುಷ್ ಹ್ಯಾಕಥಾನ್, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳೂ ಇರಲಿವೆ ಎಂದು ತಿಳಿಸಿದರು.

ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ವಿತರಣೆಯ ಆರೋಪ ಕುರಿತು ಕೇಳಿದ ಪ್ರಶ್ನೆಗೆ ಡಾ. ಆಶಾ ಜ್ಯೋತಿ ರೈ ಪ್ರತಿಕ್ರಿಯಿಸಲು ನಿರಾಕರಿಸಿದರು. ಪಾರಂಪರಿಕ ಔಷಧಗಳನ್ನು ಸೇವಿಸುವ ಮೊದಲು ವೈದ್ಯರಿಂದ ಎರಡನೇ ಅಭಿಪ್ರಾಯ ಪಡೆಯುವುದು ಉತ್ತಮ ಎಂದು ಸಲಹೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೇಶವ್ ಪಿ.ಕೆ., ಡಾ. ಮಹಮ್ಮದ್ ಇಕ್ಬಾಲ್, ವಾರ್ತಾಧಿಕಾರಿ ಖಾದರ್ ಶಾ ಸೇರಿದಂತೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

error: Content is protected !!