ಜ.4ರಂದು ಪುರಭವನದಲ್ಲಿ ಕುಲಾಲ ಯುವವೇದಿಕೆ–ದಾಸ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ‌ ‘ಕುಂಭಕಲಾವಳಿ’

ಮಂಗಳೂರು: ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ದ.ಕ. ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ.) ಮಂಗಳೂರು ಸಹಯೋಗದಲ್ಲಿ ʻಕುಂಭಕಲಾವಳಿ-ಕುಲಾಲ ಕಲಾ ಸೇವಾಂಜಲಿ’ ಕಾರ್ಯಕ್ರಮವು ಜ. 4ರಂದು ಪುರಭವನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಸಮಾರಂಭಕ್ಕೆ ಸಂಸದ- ಯದುವೀರ್ ಒಡೆಯರ್ ಹಾಗೂ ಸಚಿವರಾದ ಸತೀಶ್ ಜಾರಕಿಹೊಳಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಅನಿಲ್‌ ದಾಸ್ ಹೇಳಿದ್ದಾರೆ.

ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ, ಸಭಾಕಾರ್ಯಕ್ರಮ, ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಹಾಗೂ ಆಶಕ್ತರಿಗೆ ನೆರವು ಮುಂತಾದ ಸಾಮಾಜಿಕ ಸೇವಾ ಚಟುವಟಿಕೆಗಳು ನಡೆಯಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸಮುದಾಯದ ಸುಮಾರು 3000 ಮಂದಿ ಜನಸೇರುವ ನಿರೀಕ್ಷೆ ಇದೆ ಎಂದು ವಿವರಿಸಿದರು.

ಕಾರ್ಯಕ್ರಮವು ತನ್ನ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 8.30ಕ್ಕೆ ವೈಷ್ಣವಿ ಕ್ಷೇತ್ರ ಮುಳಿಯದ ಶ್ರೀಶಿವಾನಂದ ಸರಸ್ವತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ, ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ಡಾ. ರವಿ ಎನ್. ಅವರಿಂದ ದೀಪ ಪ್ರಜ್ವಲನೆಯೊಂದಿಗೆ ಆರಂಭಗೊಳ್ಳಲಿದೆ. ಬೆಳಿಗ್ಗೆ 9 ಗಂಟೆಗೆ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಲಿದ್ದು, ಬೆಳಿಗ್ಗೆ 9.30ಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಲಿದ್ದಾರೆ. ಶ್ರೀ ಧಾಮ ಮಾಣಿಲದ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ ಎಂದು ಅನಿಲ್‌ ದಾಸ್ ವಿವರಿಸಿದರು.

2007–08ರಲ್ಲಿ ಕುಲಾಲ/ಕುಂಭಾರ/ಮೂಲ್ಯ ಸಮುದಾಯದ ಯುವಶಕ್ತಿಯನ್ನು ಜಿಲ್ಲಾ–ರಾಜ್ಯ ಮಟ್ಟದಲ್ಲಿ ಸಂಘಟಿಸುವ ಸದುದ್ದೇಶದಿಂದ ಸ್ಥಾಪಕ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಹಾಗೂ ಸಮಾನ ಮನಸ್ಕರ ಮೂಲಕ ಸ್ಥಾಪನೆಯಾದ ಕುಲಾಲ ಯುವವೇದಿಕೆ, ಇಂದು ಅವಿಭಜಿತ ಜಿಲ್ಲೆಯಲ್ಲಿ ಎಂಟು ವಿಧಾನಸಭಾ ಘಟಕಗಳು ಹಾಗೂ ವಲಯ ಸಮಿತಿಗಳ ಮೂಲಕ ಬಲಿಷ್ಠ ಸಂಘಟನೆಯಾಗಿ ಬೆಳೆದಿದೆ. ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಸಂಘಟನೆ, ಸಮುದಾಯದ ಪ್ರತಿಭಾವಂತರನ್ನು ಗುರುತಿಸುವುದರ ಜೊತೆಗೆ ಬಡತನ ರೇಖೆಗಿಂತ ಕೆಳಗಿನವರಿಗೆ ನೆರವು ನೀಡಿದ್ದು, ಸೂರು ಇಲ್ಲದವರಿಗೆ ಕಾನೂನು ಚೌಕಟ್ಟಿನಲ್ಲಿ 9ಕ್ಕಿಂತ ಹೆಚ್ಚು ಮನೆಗಳನ್ನು ನಿರ್ಮಿಸಿ ಕೊಟ್ಟಿದೆ ಎಂದರು.

ಅಲ್ಲದೆ, ಮಂಗಳೂರಿನ ಬೊಂದೆಲ್ ವೃತ್ತ ಹಾಗೂ ಕಾರ್ಕಳ ಜೋಡು ರಸ್ತೆಯಲ್ಲಿ ಸುಸಜ್ಜಿತ ‘ಸರ್ವಜ್ಞ ವೃತ್ತ’ ನಿರ್ಮಾಣ ಸೇರಿದಂತೆ ಸಂಸ್ಥೆಯ ಸೇವೆಗಳನ್ನು ಪರಿಗಣಿಸಿ 2023ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಪುರಸ್ಕರಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹತ್ತು ಮಂದಿ ಸಾಧಕರಿಗೆ ಕುಲಾಲ ಸಿಂಧೂರ ಪ್ರಶಸ್ತಿ ಪ್ರದಾನ ನಡೆಯಲಿದೆ. ಜೊತೆಗೆ ಶೈಕ್ಷಣಿಕ ಪ್ರೋತ್ಸಾಹ ಧನ, ವೈದ್ಯಕೀಯ ನೆರವು ಹಾಗೂ ಆರ್ಥಿಕ ಸಹಾಯ ವಿತರಿಸಲಾಗುತ್ತದೆ ಎಂದು ಅನಿಲ್‌ ದಾಸ್‌ ವಿವರಿಸಿದರು.

ಅವಿಭಜಿತ ಜಿಲ್ಲೆಯ ಕುಲಾಲ ಸಂಘಗಳು/ಯುವವೇದಿಕೆಗಳ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದ್ದು, ಪ್ರಥಮ ಬಹುಮಾನ: ₹51,001, ದ್ವಿತೀಯ: ₹31,001, ತೃತೀಯ: ₹21,001
ಎಲ್ಲಾ ತಂಡಗಳಿಗೆ ನಗದು ಪುರಸ್ಕಾರ ಹಾಗೂ ಸ್ಮರಣಿಕೆ ನೀಡಲಾಗುತ್ತದೆ ಎಂದರು.

ಕುಲಾಲ ಯುವವೇದಿಕೆ ಸ್ಥಾಪಕ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ಮಾತಾಡಿ, “ಕರಾವಳಿಯಲ್ಲಿ ಸುಮಾರು 70 ಕುಲಾಲ ಸಂಘಟನೆಗಳಿದ್ದು ಎಲ್ಲವನ್ನೂ ಒಂದೇ ವೇದಿಕೆಯಲ್ಲಿ ತರುವ ಉದ್ದೇಶದಿಂದ ಯುವವೇದಿಕೆ ಸ್ಥಾಪಿಸಲಾಯಿತು. ಸಂಘಟನೆಯ ವತಿಯಿಂದ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ವಸಿತರಿಗೆ 12ರಷ್ಟು ಮನೆ ಕಟ್ಟಿ ಕೊಟ್ಟಿದ್ದೇವೆ. ಅನಾರೋಗ್ಯ ಪೀಡಿತರಿಗೆ ನೆರವಾಗಿದ್ದೇವೆ. ಸರಿಸುಮಾರು 5 ಕೋಟಿ ರೂ.ಗಳಷ್ಟು ಹಣವನ್ನು ಈಗಾಗಲೇ ಸಮಾಜಕ್ಕೆ ಖರ್ಚು ಮಾಡಿದ್ದೇವೆ. ಕನ್ಯಾನದಲ್ಲಿ ಇತ್ತೀಚಿಗೆ ಒಬ್ಬರ ಮನೆ ಸುಟ್ಟುಹೋಗಿದ್ದು ಅದನ್ನು 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಸಂಘಟನೆ ಮುಂದಾಗಿದೆ. ದಕ್ಷಿಣ ಕನ್ನಡದಲ್ಲಿ ಸುಮಾರು 3 ಲಕ್ಷ, ರಾಜ್ಯದಲ್ಲಿ 15 ಲಕ್ಷ ಕುಲಾಲ ಸಮುದಾಯದ ಜನಸಂಖ್ಯೆ ಇದ್ದು, ಸಮುದಾಯಕ್ಕೆ ಎಲ್ಲ ಕ್ಷೇತ್ರಗಳಲ್ಲಿ ಸೂಕ್ತ ಸ್ಥಾನಮಾನ ದೊರಕಿಸಿಕೊಡುವ ಪ್ರಯತ್ನ ಮುಂದುವರಿಯಲಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಭಾಗೀಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಮಜಲ್, ಕಾರ್ಯಕ್ರಮ ಸಂಯೋಜಕ . ರಾಧಾಕೃಷ್ಣ ಬಂಟ್ವಾಳ, ಹಾಗೂ ವ್ಯವಸ್ಥಾಪನಾ ಸಮಿತಿ ಸಂಚಾಲಕರು ಜಯರಾಜ್ ಪ್ರಕಾಶ್ ಉಪಸ್ಥಿತರಿದ್ದರು.

error: Content is protected !!