ಮಂಗಳೂರು: ನ್ಯೂ ಇಯರ್ ಪಾರ್ಟಿಯಿಂದ ಬಂದ ಸುಮಾರು 1,000 ಮಂದಿಯ ತಪಾಸಣೆ; 52 ಮಂದಿಯಲ್ಲಿ ಡ್ರಗ್ಸ್ ಸೇವನೆ ಪತ್ತೆ

ಮಂಗಳೂರು: ಹೊಸ ವರ್ಷದ ಸಂಭ್ರಮದ ನಡುವೆ ಮಂಗಳೂರಿನಲ್ಲಿ ಮಾದಕ ವಸ್ತುಗಳ ಭೀತಿ ಮತ್ತೊಮ್ಮೆ ಆವರಿಸಿದ್ದು, ಪೊಲೀಸ್ ಕಾರ್ಯಾಚರಣೆಯಲ್ಲಿ 52 ಮಂದಿ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಸಾಂದರ್ಭಿಕ AI ಚಿತ್ರ

ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ನಡೆಸಿದ ತೀವ್ರ ತಪಾಸಣೆಯಲ್ಲಿ ಅನುಮಾನಾಸ್ಪದವಾಗಿ ವರ್ತಿಸಿದ ಸುಮಾರು 1,000 ಮಂದಿಯನ್ನು ಪರಿಶೀಲಿಸಲಾಗಿದ್ದು, ಈ ಪೈಕಿ 52 ಮಂದಿ ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿದೆ. ಆತಂಕಕಾರಿ ಅಂಶವೆಂದರೆ, ಪತ್ತೆಯಾದವರಲ್ಲಿ 25 ಮಂದಿ ವಿದ್ಯಾರ್ಥಿಗಳಾಗಿದ್ದು, ಇಬ್ಬರು ಸ್ಥಳೀಯರು. ಇವರಲ್ಲಿ 23 ಹೊರ ಜಿಲ್ಲೆಯವರಾಗಿದ್ದರೆ ಸಾಮಾನ್ಯ ನಾಗರಿಕರು 17, ಇತರ ಕೆಲಸ ನಿರತ 10 ಮಂದಿ ಸೇರಿದ್ದಾರೆ.

ವಿದ್ಯಾರ್ಥಿಗಳ ಜೊತೆಗೆ ಕಾರ್ಮಿಕರು ಹಾಗೂ ವಿವಿಧ ವೃತ್ತಿಗಳಲ್ಲಿ ನಿರತರಾಗಿರುವ ಯುವಕರೂ ಡ್ರಗ್ಸ್ ಜಾಲದ ಬಲೆಗೆ ಬಿದ್ದಿರುವುದು ಮಂಗಳೂರಿನಲ್ಲಿ ಮಾದಕ ವಸ್ತುಗಳ ಬೇರುಗಳು ಇನ್ನಷ್ಟು ಆಳವಾಗಿ ಹರಡಿರುವ ಸೂಚನೆ ನೀಡುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

commissioner sudheer reddy

ಡ್ರಗ್ಸ್ ಸೇವನೆ ಪತ್ತೆಯಾದವರಿಗೆ ಕೌನ್ಸೆಲಿಂಗ್ ನೀಡಲಾಗುತ್ತಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್. ತಿಳಿಸಿದ್ದಾರೆ. ಆದರೆ ನಗರಕ್ಕೆ ಡ್ರಗ್ಸ್ ಸರಬರಾಜು ಹೇಗೆ ನಿರಂತರವಾಗಿ ನಡೆಯುತ್ತಿದೆ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.

ಇದರ ನಡುವೆ ಡಿಸೆಂಬರ್ 30ರಂದು ನಗರ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಮಾದಕ ವಸ್ತು ಮಾರಾಟಗಾರರನ್ನು ಬಂಧಿಸಿದ್ದು, ಒಬ್ಬ ಆರೋಪಿಯ ಬಳಿ 50 ಗ್ರಾಂ ಎಂಡಿಎಂ ಹಾಗೂ ಇಬ್ಬರ ಬಳಿ 200 ಗ್ರಾಂ ಎಂಡಿಎಂಎ ಪತ್ತೆಯಾಗಿರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಬಂಧಿತ ಮೂವರೂ ಕ್ರಿಮಿನಲ್ ಹಿನ್ನೆಲೆ ಹೊಂದಿರುವವರು ಎಂದು ಕಮೀಷನರ್‌ ತಿಳಿಸಿದ್ದಾರೆ.

ಹೊಸ ವರ್ಷಾಚರಣೆಯಂತಹ ಸಂಭ್ರಮದ ಸಂದರ್ಭಗಳನ್ನೇ ಗುರಿಯಾಗಿಸಿಕೊಂಡು ಮಾದಕ ವಸ್ತುಗಳ ಜಾಲ ನಗರಕ್ಕೆ ನುಗ್ಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಅಗತ್ಯವೆಂಬ ಕೂಗು ಕೇಳಿಬರುತ್ತಿದೆ. ಪೊಲೀಸರಷ್ಟೇ ಅಲ್ಲದೆ ಸ್ಥಳೀಯ ನಾಗರಿಕರು ಮತ್ತು ಸಂಘಟನೆಗಳ ಸಹಕಾರವಿಲ್ಲದೆ ಈ ಪಿಡುಗನ್ನು ತಡೆಗಟ್ಟುವುದು ಕಷ್ಟಕರ ಎಂಬ ಸಂದೇಶವೂ ಇದರಲ್ಲಿ ಅಡಗಿದೆ.

error: Content is protected !!