
ಆಂಧ್ರಪ್ರದೇಶ: ಸಾಲಬಾಧೆ ಹಾಗೂ ಆರ್ಥಿಕ ಸಂಕಷ್ಟಕ್ಕೆ ಮನನೊಂದ ವ್ಯಕ್ತಿಯೊಬ್ಬ ತನ್ನ ಮೂವರು ಅಪ್ರಾಪ್ತ ಮಕ್ಕಳನ್ನು ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ(ಡಿ.31) ರಾತ್ರಿ ನಂದ್ಯಾಲ ಜಿಲ್ಲೆಯ ಉಯ್ಯಾಲವಾಡ ಗ್ರಾಮದಲ್ಲಿ ನಡೆದಿದ್ದು, ಇಂದು(ಜ.1) ಬೆಳಿಗ್ಗೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕುಟುಂಬವು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಇದೇ ಕಾರಣಕ್ಕೆ ವ್ಯಕ್ತಿಯು ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮಕ್ಕಳು ಹೇಗೆ ಮೃತಪಟ್ಟಿದ್ದಾರೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಪೊಲೀಸರು ಮಕ್ಕಳ ಸಾವಿನ ಕುರಿತು ಮರಣೋತ್ತರ ಪರೀಕ್ಷಾ ವರದಿಯ ನಿರೀಕ್ಷೆಯಲ್ಲಿದ್ದಾರೆ. ಮಕ್ಕಳನ್ನು ಕೊಂದ ಬಳಿಕ ತಂದೆಯು ಮನೆಯಲ್ಲೇ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ.
ಕಳೆದ ಆಗಸ್ಟ್ ತಿಂಗಳಷ್ಟೇ ಈತನ ಪತ್ನಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿಯ ಅಗಲಿಕೆ ಮತ್ತು ಬೆನ್ನಟ್ಟಿದ ಸಾಲದ ಭೀತಿಯಿಂದ ಕುಟುಂಬವು ತೀವ್ರ ಸಂಕಷ್ಟದಲ್ಲಿತ್ತು ಎಂದು ಅಲ್ಲಗಡ್ಡ ಡಿಎಸ್ಪಿ ಕೆ. ಪ್ರಮೋದ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.