ಸ್ವಿಟ್ಜರ್‌ಲ್ಯಾಂಡ್: ಹೊಸ ವರ್ಷದ ಆಚರಣೆಯ ವೇಳೆ ಸ್ವಿಸ್ ಆಲ್ಪ್ಸ್‌ನ ಐಷಾರಾಮಿ ಸ್ಕೀ ರೆಸಾರ್ಟ್‌ನಲ್ಲಿ ಸ್ಫೋಟ ಸಂಭವಿಸಿ 40ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ವಿಟ್ಜರ್‌ಲ್ಯಾಂಡ್ ಪೊಲೀಸರು ಗುರುವಾರ ಮುಂಜಾನೆ ತಿಳಿಸಿದ್ದಾರೆ.

ಕ್ರಾನ್ಸ್–ಮೊಂಟಾನಾ ಆಲ್ಪೈನ್ ಸ್ಕೀ ರೆಸಾರ್ಟ್ ಪುರಸಭಾ ವ್ಯಾಪ್ತಿಯಲ್ಲಿರುವ ‘ಲೆ ಕಾನ್ಸ್ಟೆಲೇಷನ್’ ಬಾರ್‌ನಲ್ಲಿ ಬೆಳಗಿನ ಜಾವ ಸುಮಾರು 1.30ರ ವೇಳೆಗೆ (ಸ್ಥಳೀಯ ಸಮಯ) ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸ್ ವಕ್ತಾರ ಗೇಟನ್ ಲಾಥಿಯಾನ್ ಹೇಳಿದ್ದಾರೆ. ಘಟನೆ ವೇಳೆ ಕಟ್ಟಡದೊಳಗೆ ನೂರಕ್ಕೂ ಹೆಚ್ಚು ಮಂದಿ ಇದ್ದರು ಎನ್ನಲಾಗಿದೆ.
“ಅನೇಕರು ಗಾಯಗೊಂಡಿದ್ದು, ಹಲವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಕಿಯ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ,” ಎಂದು ಅವರು ತಿಳಿಸಿದ್ದಾರೆ. ಅಂತರರಾಷ್ಟ್ರೀಯ ಖ್ಯಾತಿಯ ಪ್ರವಾಸಿ ತಾಣವಾಗಿರುವ ಕಾರಣ ಘಟನಾ ಸ್ಥಳದಲ್ಲಿ ವಿವಿಧ ದೇಶಗಳ ಪ್ರವಾಸಿಗರು ಇದ್ದರು ಎನ್ನಲಾಗಿದೆ.

ಘಟನೆಯ ನಂತರ ಬಾಧಿತ ಕುಟುಂಬಗಳ ನೆರವಿಗಾಗಿ ಸ್ವಾಗತ ಕೇಂದ್ರ ಮತ್ತು ಸಹಾಯವಾಣಿ ಆರಂಭಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಹಲವಾರು ಡಜನ್ ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಪ್ರವಾಸಿಗರ ನೆಚ್ಚಿನ ತಾಣ ಕ್ರಾನ್ಸ್–ಮೊಂಟಾನಾ:
ಸ್ವಿಟ್ಜರ್‌ಲ್ಯಾಂಡ್‌ನ ವಲಾಯಿಸ್ ಕ್ಯಾಂಟನ್‌ನ ಫ್ರೆಂಚ್ ಭಾಷಾಭಾಗದಲ್ಲಿರುವ ಕ್ರಾನ್ಸ್–ಮೊಂಟಾನಾ ಬೇಸಿಗೆ–ಚಳಿಗಾಲದ ಪ್ರವಾಸ, ಸ್ಕೀಯಿಂಗ್, ಗಾಲ್ಫ್ ಹಾಗೂ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಮ್ಯಾಟರ್‌ಹಾರ್ನ್‌ಗೆ ಸಮೀಪವಿರುವ ಈ ತಾಣವು ಬ್ರಿಟಿಷ್ ಸೇರಿದಂತೆ ಅಂತರರಾಷ್ಟ್ರೀಯ ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ. ಜನವರಿ ಅಂತ್ಯದಲ್ಲಿ ಇಲ್ಲಿ ಎಫ್‌ಐಎಸ್ ವಿಶ್ವಕಪ್ ಸ್ಪೀಡ್ ಸ್ಕೀಯಿಂಗ್ ಸ್ಪರ್ಧೆ ನಡೆಯಲಿರುವುದಾಗಿ ಬಿಬಿಸಿ ವರದಿ ಉಲ್ಲೇಖಿಸಿದೆ.