ಮಂಗಳೂರು: ರಾಜ್ಯ ಮಟ್ಟದ ಜಿನ್ ಭಜನಾ ಸ್ಪರ್ಧೆ ಸೀಸನ್–9ರ ಸೆಮಿಫೈನಲ್ ಹಾಗೂ ಫೈನಲ್ ಹಂತಗಳು 2026ರ ಜನವರಿ 3 ಮತ್ತು 4ರಂದು ಪಿಲಿಕುಳ ನಿಸರ್ಗಧಾಮದ ಸೌಟ್ಸ್ ಮತ್ತು ಗೈಡ್ಸ್ ಸಭಾಭವನದಲ್ಲಿ ನಡೆಯಲಿವೆ ಎಂದು ಭಾರತೀಯ ಜೈನ್ ಮಿಲನ್ ವಲಯ–8ರ ಉಪಾಧ್ಯಕ್ಷ ಸುದರ್ಶನ್ ಜೈನ್ ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಜೈನ್ ಮಿಲನ್ ವಲಯ–8ರ ಆಶ್ರಯದಲ್ಲಿ ಈ ಬಾರಿ ಮಂಗಳೂರು ಜೈನ್ ಮಿಲನ್ ಅತಿಥೇಯತ್ವದಲ್ಲಿ ಈ ಭವ್ಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಭಾರತದ ಸಮೃದ್ಧ ಸಾಂಸ್ಕೃತಿಕ ಹಾಗೂ ಅಧ್ಯಾತ್ಮಿಕ ಪರಂಪರೆಯನ್ನು ಜನಸಾಮಾನ್ಯರೊಳಗೆ ಇನ್ನಷ್ಟು ಆಳವಾಗಿ ಬೆಳೆಸುವ ಉದ್ದೇಶದಿಂದ ಜಿನ್ ಭಜನಾ ಸ್ಪರ್ಧೆ ಸೀಸನ್–9ನ್ನು ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಉದ್ದೇಶ ಜೈನ ಧರ್ಮದ ತತ್ವಗಳು, ಅಹಿಂಸೆ, ಆತ್ಮಶುದ್ಧಿ ಹಾಗೂ ಭಕ್ತಿ ಮಾರ್ಗವನ್ನು ಸಂಗೀತ, ಭಜನೆ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗಳ ಮೂಲಕ ಜನತೆಗೆ ತಲುಪಿಸುವುದಾಗಿದೆ. ಈ ಸಂದರ್ಭದಲ್ಲಿ ಜೈನ ಸಂಪ್ರದಾಯದ ಗಣ್ಯ ಆಚಾರ್ಯರು, ಪೂಜ್ಯ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದು, ಸಮಾಜದ ಹಿರಿಯ ಪ್ರಮುಖ ಗಣ್ಯರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.
ಭಕ್ತಿ ಸಂಗೀತ, ಜನ ಭಜನೆಗಳು, ಶಾಸ್ತ್ರೀಯ ಹಾಗೂ ಸಮಕಾಲೀನ ಸಂಗೀತ ಪ್ರಸ್ತುತಿಗಳು ಹಾಗೂ ಪ್ರೇರಣಾದಾಯಕ ಸಂದೇಶಗಳ ಮೂಲಕ ಎಲ್ಲ ವಯೋಮಾನದ ಜನರಿಗೂ ಆಧ್ಯಾತ್ಮಿಕ ಅನುಭವ ನೀಡಲಾಗುವುದು. ಖ್ಯಾತ ಕಲಾವಿದರು ಹಾಗೂ ಯುವ ಪ್ರತಿಭೆಗಳು ತಮ್ಮ ಕಲಾ ಸೇವೆಯನ್ನು ಸಮರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಲಿದ್ದಾರೆ ಎಂದು ಸುದರ್ಶನ್ ಜೈನ್ ತಿಳಿಸಿದರು.

ಸಮಾರೋಪ ಸಮಾರಂಭ:
2026ರ ಜನವರಿ 4ರಂದು (ಭಾನುವಾರ) ಸಂಜೆ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ಜೈನ್ ಮಿಲನ್ (ನವದೆಹಲಿ) ಕಾರ್ಯಾಧ್ಯಕ್ಷರಾದ ವೀರಾಂಗನಾ ಅನಿತಾ ಸುರೇಂದ್ರ ಕುಮಾರ್ ವಹಿಸಲಿದ್ದಾರೆ. ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತಿಯಲ್ಲಿ, ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಸುಪ್ರಿಯಾ ಹರ್ಷೇಂದ್ರ ಕುಮಾರ್, ಹಿರಿಯ ನ್ಯಾಯವಾದಿ ಪಿ.ಪಿ. ಹೆಗ್ಡೆ ಉಪಸ್ಥಿತರಿರಲಿದ್ದಾರೆ. ವಿಶೇಷ ಆಹ್ವಾನಿತರಾಗಿ ನಟಿ ಹಾಗೂ ಲೇಖಕಿ ರಂಜನಿ ರಾಘವನ್, ಖ್ಯಾತ ಗಾಯಕ ರಾಜೇಶ್ ಕೃಷ್ಣನ್, ಕಂಟೆಂಟ್ ಕ್ರಿಯೇಟರ್ ‘ಅಯೋ ಶ್ರದ್ಧಾ’ ಖ್ಯಾತಿಯ ಶ್ರದ್ಧಾ ಜೈನ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಜೈನ್ ಮಿಲನ್ ವಲಯ–8ರ ನಿಕಟಪೂರ್ವ ಅಧ್ಯಕ್ಷ ಪುಷ್ಪರಾಜ್ ಜೈನ್, ಮಂಗಳೂರು ಜೈನ್ ಮಿಲನ್ ಅಧ್ಯಕ್ಷ ರತ್ನಾಕರ್ ಜೈನ್, ಕಾರ್ಯದರ್ಶಿ ವೈಶಾಲಿ ಪಡಿವಾಳ್, ಕೋಶಾಧಿಕಾರಿ ಪ್ರಿಯದರ್ಶಿನಿ ಉಪಸ್ಥಿತರಿದ್ದರು.