ಬಂಟ್ವಾಳ: ನಗರದ ಮಂಗಳೂರು ರಸ್ತೆಯಲ್ಲಿರುವ ಇಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಗಳಲ್ಲಿ ಪಕ್ಕದ ಮಳಿಗೆಗಳಿಗೆ ಹರಡಿ, ಐದಾರು ಮಳಿಗೆಗಳಿಗೆ ಭಾರೀ ಹಾನಿ ಆಗಿರುವ ಘಟನೆ ಬುಧವಾರ (ಡಿ.31) ತಡರಾತ್ರಿ ಸಂಭವಿಸಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಸರಕು ಸುಟ್ಟು ಭಸ್ಮವಾಗಿದೆ.

ಸಂತೋಷ್ ಕುಮಾರ್ ಕೊಡಂಗೆಯವರ ಮಾಲಕತ್ವದ ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿದ್ದ ಸುಲಭ ಜ್ವಲನಶೀಲ ವಸ್ತುಗಳು ಮತ್ತು ಇಲೆಕ್ಟ್ರಾನಿಕ್ ಸಾಮಗ್ರಿಗಳ ಕಾರಣ ಬೆಂಕಿಯ ತೀವ್ರತೆ ಹೆಚ್ಚಾಗಿದೆ. ಸ್ಥಳೀಯರು ಪ್ರಾರಂಭದಲ್ಲಿ ನಿಯಂತ್ರಿಸಲು ಯತ್ನಿಸಿದರೂ, ಬೆಂಕಿ ಹತೋಟಿಗೆ ಮೀರಿ ಹಬ್ಬಿತು.
ಬೆಂಕಿಯು ಪಕ್ಕದಲ್ಲಿದ್ದ ಅಮಿತ್ ಹೋಟೆಲ್, ಸ್ಟಾರ್ ವೈನ್ಸ್, ಎಸ್.ಬಿ. ಟೈಲರಿಂಗ್ ಶಾಪ್, ಪಡೀಲ್ ಫಾಸ್ಟ್ ಫುಡ್ ಸೇರಿದ ಹಲವಾರು ಸಣ್ಣಪುಟ್ಟ ಅಂಗಡಿಗಳಿಗೆ ಹರಡಿ ಬೆಂಕಿಗೆ ಆಹುತಿಯಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಬಂಟ್ವಾಳದಿಂದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಕಾರ್ಯ ನಡೆಸಿದೆ.