ಮಂಗಳೂರು: ಬಿಕರ್ನಕಟ್ಟೆಯ ಕಾರ್ಮೆಲ್ ಹಿಲ್‌ನಲ್ಲಿರುವ ದಿವ್ಯಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ 2026ರ ವಾರ್ಷಿಕ ಮಹೋತ್ಸವವನ್ನು ಜನವರಿ 14 ಮತ್ತು 15ರಂದು ಭಕ್ತಿಭಾವ ಹಾಗೂ ವೈಭವದಿಂದ ಆಚರಿಸಲಾಗುವುದು ಎಂದು ಬಾಲಯೇಸುವಿನ ಪುಣ್ಯಕ್ಷೇತ್ರದ ಮುಖ್ಯಸ್ಥ ವಂದನೀಯ ಫಾ. ಮೆಲ್ವಿನ್ ಡಿಕುನ್ಹಾ ಹೇಳಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಅವರು, ಜ.14ರಂದು ಸಂಜೆ 6 ಗಂಟೆಗೆ ನಡೆಯುವ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆಯನ್ನು ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಜೆರಾಲ್ಡ್ ಐಸಾಕ್ ಲೋಬೊ ಅವರು ನೆರವೇರಿಸಲಿದ್ದಾರೆ. ಅದೇ ದಿನ ಬೆಳಿಗ್ಗೆ 10 ಗಂಟೆಗೆ ವೃದ್ಧರು ಹಾಗೂ ಅಸ್ವಸ್ಥರಿಗಾಗಿ ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ವಿಶೇಷ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ ಎಂದರು.
ಹಬ್ಬದ ಎರಡನೇ ದಿನವಾದ ಜ.15ರಂದು ಬೆಳಿಗ್ಗೆ 10 ಗಂಟೆಗೆ ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ದುಮಿಂಗ್ ಡಾಯಸ್ ಮಕ್ಕಳಿಗಾಗಿ ವಿಶೇಷ ಬಲಿಪೂಜೆಯನ್ನು ನೆರವೇರಿಸಲಿದ್ದಾರೆ. ಇದೇ ದಿನ ಸಂಜೆ 6 ಗಂಟೆಗೆ ಮಂಗಳೂರು ಧರ್ಮಪ್ರಾಂತ್ಯದ ಪ್ರಧಾನ ಗುರುಗಳಾದ ಅತೀ ವಂದನೀಯ ಮೊನ್ಸಿಂಞೆರ್ ಮ್ಯಾಕ್ಸಿಂ ನೊರೊನ್ಹಾ ಅವರಿಂದ ಸಮಾರೋಪ ಪ್ರಾರ್ಥನಾವಿಧಿ ಜರುಗಲಿದೆ.
ಜ.14ರಂದು ಬೆಳಿಗ್ಗೆ 6 ಗಂಟೆಗೆ (ಕೊಂಕಣಿ), 8 ಗಂಟೆಗೆ (ಇಂಗ್ಲಿಷ್) ಮತ್ತು ಮಧ್ಯಾಹ್ನ 1 ಗಂಟೆಗೆ (ಕನ್ನಡ) ಬಲಿಪೂಜೆಗಳು ನಡೆಯಲಿವೆ. ಜನವರಿ 15ರಂದು ಬೆಳಿಗ್ಗೆ 6 ಹಾಗೂ 8 ಗಂಟೆಗೆ ಕೊಂಕಣಿ ಭಾಷೆಯಲ್ಲಿ, ಬೆಳಿಗ್ಗೆ 10 ಗಂಟೆಗೆ ಮಕ್ಕಳಿಗಾಗಿ ವಿಶೇಷ ಪೂಜೆ ಹಾಗೂ ಮಧ್ಯಾಹ್ನ 1 ಗಂಟೆಗೆ ಮಲಯಾಳಂ ಭಾಷೆಯಲ್ಲಿ ಬಲಿಪೂಜೆ ನೆರವೇರಲಿದೆ.

ವಾರ್ಷಿಕ ಮಹೋತ್ಸವದ ಪೂರ್ವಸಿದ್ಧತೆಯಾಗಿ ಜ. 5ರಿಂದ 13ರವರೆಗೆ ನವದಿನಗಳ ನವೇನಾ ಪ್ರಾರ್ಥನೆ ನಡೆಯಲಿದೆ. ಈ ಅವಧಿಯಲ್ಲಿ ಪ್ರತಿದಿನ ಬೆಳಿಗ್ಗೆ 6, 7.30, 9, 10.30 ಹಾಗೂ ಮಧ್ಯಾಹ್ನ 1 ಗಂಟೆಗೆ ಕೊಂಕಣಿ ಭಾಷೆಯಲ್ಲಿ, ಸಂಜೆ 4 ಗಂಟೆಗೆ ಮಲಯಾಳಂ, 5 ಗಂಟೆಗೆ ಇಂಗ್ಲಿಷ್ ಮತ್ತು ರಾತ್ರಿ 7.45ಕ್ಕೆ ಕನ್ನಡದಲ್ಲಿ ಬಲಿಪೂಜೆಗಳು ನಡೆಯಲಿವೆ. ಪ್ರತಿದಿನ ಮಧ್ಯಾಹ್ನ 11.45ರಿಂದ 12.30ರವರೆಗೆ ಪರಮ ಪ್ರಸಾದದ ಆರಾಧನೆ ನಡೆಯಲಿದ್ದು, ವಿವಿಧ ಅಗತ್ಯಗಳಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು.
ನವೇನಾ ದಿನಗಳಲ್ಲಿ ಜನವರಿ 5ರಂದು ಬೆಳಿಗ್ಗೆ 10.30ರ ಬಲಿಪೂಜೆಯನ್ನು ಬರೇಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಇಗ್ನೇಶಿಯಸ್ ಡಿಸೋಜಾ ಅವರು ನೆರವೇರಿಸಲಿದ್ದು, ಅನಿವಾಸಿ ಭಾರತೀಯರಿಗಾಗಿ ಪ್ರಾರ್ಥನೆ ಸಲ್ಲಿಸಲಾಗುವುದು. ಜನವರಿ 10ರಂದು ಬೆಳಿಗ್ಗೆ 10.30ರ ಬಲಿಪೂಜೆಯನ್ನು ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಹೆನ್ರಿ ಡಿಸೋಜಾ ನೆರವೇರಿಸಲಿದ್ದು, ಈ ದಿನ ಮಕ್ಕಳಿಗಾಗಿ ವಿಶೇಷ ಪ್ರಾರ್ಥನೆ ನಡೆಯಲಿದೆ.
ಪ್ರತಿದಿನ ಸಂಜೆ 6 ಗಂಟೆಯ ಬಲಿಪೂಜೆಯ ನಂತರ ಸುಮಾರು 7.15ಕ್ಕೆ ದಿವ್ಯಬಾಲ ಯೇಸುವಿನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಮಹೋತ್ಸವದ ಹೊರೆಕಾಣಿಕೆ ಜನವರಿ 3ರಂದು ಸಂಜೆ 4.30ಕ್ಕೆ ಕುಲಶೇಕರದ ಹೋಲಿಕ್ರಾಸ್ ಚರ್ಚ್‌ನಿಂದ ಆರಂಭಗೊಳ್ಳಲಿದ್ದು, ಅಂತಿಮ ಹಂತದಲ್ಲಿ ‘ಸಹಬಾಳ್ವೆ’ ವಿಶೇಷ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಉಪಕುಲಪತಿ ವಂ. ಡಾ. ಪ್ರವೀಣ್ ಮಾರ್ಟಿಸ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ.
ನವೇನಾ ಹಾಗೂ ಹಬ್ಬದ ದಿನಗಳಾದ ಜನವರಿ 5ರಿಂದ 15ರವರೆಗೆ ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಜನವರಿ 7ರಂದು ಕಣ್ಣಿನ ಶಿಬಿರ ಹಾಗೂ ಜನವರಿ 9 ಮತ್ತು 10ರಂದು ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ.
ಕಾರ್ಮೆಲ್ ಸಭೆಯ ಸುಧಾರಕರಾದ ಶಿಲುಬೆಯ ಸಂತ ಯೊವಾನ್ನರ ಸಂತ ಪದವಿಗೇರಿಕೆಯ 300 ವರ್ಷ ಹಾಗೂ ಧರ್ಮಸಭೆಯ ಪಂಡಿತ ಘೋಷಣೆಯ ಶತಮಾನೋತ್ಸವದ ಅಂಗವಾಗಿ ‘ಕಾರ್ಮೆಲ್ ಇಗ್ನೈಟ್’ ಯೋಜನೆಯಡಿ ಬಡ ಹಾಗೂ ಯೋಗ್ಯ 400 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಸಮಾಜಾಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ಸಂತ ಯೊವಾನ್ನರ ಜೀವನ ಹಾಗೂ ಬೋಧನೆಗಳ ಕುರಿತ ವಿಶೇಷ ವಸ್ತು ಪ್ರದರ್ಶನವೂ ನಡೆಯಲಿದೆ ಎಂದು ಫಾ. ಮೆಲ್ವಿನ್ ಡಿಕುನ್ಹಾ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಾಲಯೇಸುವಿನ ಪುಣ್ಯಕ್ಷೇತ್ರದ ನಿರ್ದೇಶಕ ವಂದನೀಯ ಫಾ. ಸ್ಟೀಫನ್ ಪಿರೇರಾ, ಕಾರ್ಮೆಲ್ ಸಭೆಯ ವಂದನೀಯ ಫಾ. ದೀಪ್ ಫೆರ್ನಾಂಡಿಸ್, ಬಾಳೊಕ್ ಜೆಜು ಕುಟಮ್‌ನ ವಲೇರಿಯನ್ ಫುರ್ಟಾಡೊ ಹಾಗೂ ವ್ಯವಸ್ಥಾಪಕ ವಿಲ್‌ಫ್ರೆಡ್ ಲಸ್ರಾದೊ ಉಪಸ್ಥಿತರಿದ್ದರು.