ಬಾಡಿಗೆ ನೆಪದಲ್ಲಿ ಕರೆದೊಯ್ದು ಮಾರಣಾಂತಿಕ ಹಲ್ಲೆ- ವ್ಯಕ್ತಿ ಸಾವು: ಇಬ್ಬರು ಆರೋಪಿಗಳ ಬಂಧನ

ಸುಳ್ಯ: ಬಾಡಿಗೆಯ ನೆಪದಲ್ಲಿ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಕಿರುಕುಳ ನೀಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸುಳ್ಯ ಕಸಬ ನಿವಾಸಿ ಮೊಹಮ್ಮದ್ ರಫೀಕ್ (41) ಹಾಗೂ ಸುಳ್ಯ ಸಂಪಾಜೆ ನಿವಾಸಿ ಮನೋಹರ್ ಕೆ.ಎಸ್. @ ಮನು (42) ಬಂಧಿತ ಆರೋಪಿಗಳು.

ಘಟನೆಯ ವಿವರ:
ಸುಳ್ಯ ಕಸಬಾ ಗ್ರಾಮದ ನಿವಾಸಿ ಸುಮಯ್ಯಾ (35) ಅವರು ನೀಡಿದ ದೂರಿನಂತೆ, ಅವರ ಪತಿ ಅಬ್ದುಲ್ ಜಬ್ಬಾರ್ ಅವರನ್ನು 2025ರ ಅಕ್ಟೋಬರ್ 16ರಂದು ಮಧ್ಯಾಹ್ನ ಆರೋಪಿಗಳಾದ ಮೊಹಮ್ಮದ್ ರಫೀಕ್ ಮತ್ತು ಇತರರು ಬಾಡಿಗೆಯ ವಿಚಾರ ಹೇಳಿಕೊಂಡು ದುಗ್ಗಲಡ್ಕ ಎಂಬಲ್ಲಿಗೆ ಕರೆದುಕೊಂಡು ಹೋಗಿ ಕಿರುಕುಳ ನೀಡಿದ್ದಾರೆ. ಬಳಿಕ ಸುಳ್ಯ ಕಲ್ಲುಗುಂಡಿಗೆ ಕರೆತಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿ ಕಳುಹಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮುಂದಿನ ದಿನವಾದ ಅಕ್ಟೋಬರ್ 17ರಂದು ಅಬ್ದುಲ್ ಜಬ್ಬಾರ್ ಮನೆಯಲ್ಲಿದ್ದಾಗ ತೀವ್ರ ಅನಾರೋಗ್ಯಕ್ಕೀಡಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಅಬ್ದುಲ್ ಜಬ್ಬಾರ್ ಅವರ ಸಾವಿಗೆ ಮೊಹಮ್ಮದ್ ರಫೀಕ್ ಪಡು ಹಾಗೂ ಇತರರು ನಡೆಸಿದ ಹಲ್ಲೆಯೇ ಕಾರಣ ಎಂದು ಆರೋಪಿಸಿ, ಅಕ್ಟೋಬರ್ 18ರಂದು ಸುಮಯ್ಯಾ ಅವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. 125/2025, ಕಲಂ 105 ಜೊತೆಗೆ 3(5) ಬಿಎನ್‌ಎಸ್‌ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆಯ ವೇಳೆ ಆರೋಪಿಗಳು ನಡೆಸಿದ ಹಲ್ಲೆಯ ಪರಿಣಾಮವೇ ಅಬ್ದುಲ್ ಜಬ್ಬಾರ್ ಅವರ ಸಾವಿಗೆ ಕಾರಣವೆಂದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ, ಪ್ರಕರಣವನ್ನು ಕಲಂ 103 ಜೊತೆಗೆ 3(5) ಬಿಎನ್‌ಎಸ್‌ ಅಡಿಯಲ್ಲಿ ಕೊಲೆ ಪ್ರಕರಣವಾಗಿ ಮಾರ್ಪಡಿಸಲಾಗಿದೆ.

ಪ್ರಕರಣದ ತನಿಖೆ ಕೈಗೊಂಡ ಸುಳ್ಯ ಪೊಲೀಸರು, ಆರೋಪಿಯಾದ ಸುಳ್ಯ ಕಸಬ ನಿವಾಸಿ ಮೊಹಮ್ಮದ್ ರಫೀಕ್ (41)ನನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಮುಂದಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಇನ್ನೋರ್ವ ಆರೋಪಿಯಾದ ಸುಳ್ಯ ಸಂಪಾಜೆ ನಿವಾಸಿ ಮನೋಹರ್ ಕೆ.ಎಸ್. @ ಮನು (42) ಎಂಬಾತನನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!