ಶ್ರೀ ಕ್ಷೇತ್ರ ನೆಲ್ಲಿತೀರ್ಥಕ್ಕೆ ಜನವರಿ 3ರಂದು ಶೀರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಭೇಟಿ

ಮಂಗಳೂರು: ಐತಿಹಾಸಿಕ ಪ್ರಸಿದ್ಧಿಯ ಶ್ರೀ ಕ್ಷೇತ್ರ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾ ದೇವಾಲಯಕ್ಕೆ ಭಾವೀ ಪರ್ಯಾಯ ಪೀಠಾಧೀಶರಾಗಿದ್ದು, ಪ್ರಥಮ ಬಾರಿಗೆ ಸರ್ವಜ್ಞ ಪೀಠವನ್ನು ಅಲಂಕರಿಸಲಿರುವ ಶೀರೂರು ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಜನವರಿ 3, 2026ರ ಶನಿವಾರ ವಿಶೇಷ ಭೇಟಿ ನೀಡಲಿದ್ದಾರೆ. ಪರ್ಯಾಯ ಪೂರ್ವಭಾವಿ ಸಂಚಾರದಲ್ಲಿರುವ ಶ್ರೀಪಾದರು ಈ ಸಂದರ್ಭದಲ್ಲಿ ವಿಶೇಷ ಹುಣ್ಣಿಮೆ ತೀರ್ಥ ಸ್ನಾನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸ್ವಾಮೀಜಿಯವರು ಬೆಳಿಗ್ಗೆ ಸುಮಾರು 7.30 ಗಂಟೆಗೆ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ, ಭಕ್ತರು ಹಾಗೂ ಸ್ಥಳೀಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪರಮಪೂಜ್ಯ ಸ್ವಾಮೀಜಿಯವರನ್ನು ಸ್ವಾಗತಿಸಿ ಅವರ ಆಶೀರ್ವಾದ ಪಡೆಯುವಂತೆ ಮನವಿ ಮಾಡಿದೆ.

ನೆಲ್ಲಿತೀರ್ಥ ಗುಹಾ ದೇವಾಲಯವು ಅಪಾರ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವನ್ನು ಹೊಂದಿದ ಕ್ಷೇತ್ರವಾಗಿದೆ. ಮಂಗಳೂರಿನಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಈ ಕ್ಷೇತ್ರದಲ್ಲಿ ಶ್ರೀ ಸೋಮನಾಥೇಶ್ವರ ದೇವಾಲಯದ ಬಲಭಾಗದಲ್ಲಿ ನೈಸರ್ಗಿಕ ಗುಹೆಯಿದ್ದು, ಗುಹೆಯೊಳಗೆ ಸುಮಾರು 200 ಮೀಟರ್‌ಗಳಷ್ಟು ದೂರ ಕ್ರಮಿಸಿದರೆ ಪವಿತ್ರ ಸರೋವರವೊಂದನ್ನು ತಲುಪಬಹುದು. ಇಲ್ಲಿ ತೀರ್ಥ ಸ್ನಾನ ಮಾಡಿ ಶಿವಲಿಂಗ ದರ್ಶನ ಮಾಡುವ ಅವಕಾಶ ಲಭ್ಯವಿದೆ.

ಮಹರ್ಷಿ ಜಾಬಾಲಿಯ ತಪಸ್ಸಿನ ತಾಣವೆಂದು ಪ್ರಸಿದ್ಧಿಯಾಗಿರುವ ಈ ಗುಹೆಯ ಒಳಭಾಗದಲ್ಲಿ ಸದಾ ನೆಲ್ಲಿಕಾಯಿ ಆಕಾರದಲ್ಲಿ ನೀರು ತೊಟ್ಟಿಕ್ಕುತ್ತಿರುತ್ತದೆ. ಇದರಿಂದಲೇ ಈ ಕ್ಷೇತ್ರಕ್ಕೆ ‘ನೆಲ್ಲಿತೀರ್ಥ’ ಅಥವಾ ‘ಆಮಲಕ ತೀರ್ಥ’ ಎಂಬ ಹೆಸರು ಬಂದಿದೆ. ಈ ದೇವಾಲಯದಲ್ಲಿ ಶ್ರೀ ಸೋಮನಾಥೇಶ್ವರನ ಜೊತೆಗೆ ಶ್ರೀ ಮಹಾಗಣಪತಿ ದೇವರು ಹಾಗೂ ಜಾಬಾಲಿ ಮಹರ್ಷಿಗಳ ಸನ್ನಿಧಾನವಿದೆ.

ಜನವರಿ 2ರಿಂದ 7, 2026ರವರೆಗೆ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಹಾಗೂ ಉತ್ಸವಗಳು ವಿಜೃಂಭಣೆಯಿಂದ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.

ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಅಧೀನದಲ್ಲಿದ್ದು, ಹೆಚ್ಚಿನ ಮಾಹಿತಿ ಹಾಗೂ ವಿವರಗಳಿಗಾಗಿ ದೂರವಾಣಿ ಸಂಖ್ಯೆ 0824-2299142, 8088708914 ಅಥವಾ 9986376974 ಅನ್ನು ಸಂಪರ್ಕಿಸಬಹುದು.

error: Content is protected !!