ಮಂಗಳೂರು: ನಾಯಿಗಳ ವಿಚಾರಕ್ಕೆ ಸಂಬಂಧಿಸಿ ನವೆಂಬರ್ 7ರಂದು ಸುಪ್ರೀಂ ಕೋರ್ಟ್ ಹೊರಡಿಸಿದ ಮಧ್ಯಂತರ ತೀರ್ಪನ್ನು ವಿರೋಧಿಸಿ, ಬೀದಿ ನಾಯಿಗಳ ನಿರ್ವಹಣೆಗೆ ವೈಜ್ಞಾನಿಕ ಹಾಗೂ ಮಾನವೀಯ ಕ್ರಮಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಜನವರಿ 4, 2026ರಂದು ಮಂಗಳೂರಿನಲ್ಲಿ ಅಖಿಲ ಭಾರತ ಮಟ್ಟದ ಪ್ರಾಣಿ ಕಲ್ಯಾಣ ಸಂಘಟನೆಗಳು ಹಾಗೂ ಪ್ರಾಣಿಪ್ರಿಯರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಿಮಲ್ ಕೇರ್ ಟ್ರಸ್ಟ್‌ನ ಅಡ್ವೊಕೇಟ್ ಮತ್ತು ಟ್ರಸ್ಟಿ ಸುಮಾ ನಾಯಕ್, ಆರೋಗ್ಯಕರ ಬೀದಿ ನಾಯಿಗಳನ್ನು ಶೆಲ್ಟರ್‌ಗಳಿಗೆ ಸೇರಿಸುವಂತೆ ಸೂಚಿಸಿರುವ ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶವು ಅವೈಜ್ಞಾನಿಕ ಹಾಗೂ ಅನುಷ್ಠಾನಯೋಗ್ಯವಲ್ಲ ಎಂದು ಅಭಿಪ್ರಾಯಪಟ್ಟರು. ಬೀದಿನಾಯಿಗಳು ಕಚ್ಚಿದ ಉದಾಹರಣೆ ಕಡಿಮೆ. ಆದರೆ ಸಾಕು ನಾಯಿಗಳೇ ಜಾಸ್ತಿ ಕಚ್ಚಿರುವ ಉದಾಹರಣೆಗಳಿವೆ. ಹಾಗಾಗಿ ಮಾನವ ಕಚ್ಚಿದ ಇತಿಹಾಸವಿರುವ ಅಥವಾ ಆಕ್ರಮಣಕಾರಿ ವರ್ತನೆ ತೋರಿದ ಬೀದಿ ನಾಯಿಗಳನ್ನು ಮಾತ್ರ ಪಶುವೈದ್ಯರ ದೃಢೀಕರಣದೊಂದಿಗೆ ವೀಕ್ಷಣೆಯಡಿಯಲ್ಲಿ ಇಡಬೇಕು ಎಂದು ಹೇಳಿದರು.
ನಗರದಲ್ಲಿ 25 ಸಾವಿರಕ್ಕೂ ಅಧಿಕ ಬೀದಿ ನಾಯಿಗಳಿರುವ ಹಿನ್ನೆಲೆಯಲ್ಲಿ ಒಂದೇ ಎನಿಮಲ್ ಬರ್ತ್ ಕಂಟ್ರೋಲ್ (ABC) ಕೇಂದ್ರ ಸಾಲದು. ಸರ್ಕಾರ ತಕ್ಷಣವೇ ನಗರ ಸೇರಿದಂತೆ ಎಲ್ಲೆಡೆ ಹೆಚ್ಚಿನ ಎಬಿಸಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂಬುದು ಪ್ರತಿಭಟನೆಯ ಪ್ರಮುಖ ಬೇಡಿಕೆಯಾಗಿದೆ ಎಂದು ಅವರು ತಿಳಿಸಿದರು.
ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಿ, ಲಸಿಕೆ ಹಾಕಿ ಅದೇ ಪ್ರದೇಶಕ್ಕೆ ಮರಳಿಸುವುದೇ ದೀರ್ಘಕಾಲೀನ ಪರಿಹಾರವಾಗಿದೆ. ನಾಯಿಗಳನ್ನು ಏಕಾಏಕಿ ಹಿಡಿದು ಶೆಲ್ಟರ್‌ಗಳಿಗೆ ಸೇರಿಸಿ ನಾಲ್ಕು ವಾರಗಳ ಕಾಲ ಸರ್ವೆ ನಡೆಸುವಂತೆ ನೀಡಿರುವ ನಿರ್ದೇಶನ ಪ್ರಾಯೋಗಿಕವಲ್ಲ ಎಂದು ಸಂಘಟನೆಗಳು ಟೀಕಿಸಿವೆ. ಆರೋಗ್ಯಕರ ನಾಯಿಗಳನ್ನು ಬೀದಿಯಿಂದ ತೆಗೆದು ಶೆಲ್ಟರ್‌ಗಳಿಗೆ ಸೇರಿಸದಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಹಸ್ತಕ್ಷೇಪ ಅರ್ಜಿಗಳನ್ನು ಸಲ್ಲಿಸಲಾಗಿದ್ದರೂ ಅವುಗಳ ವಿಚಾರಣೆ ನಡೆಯುತ್ತಿಲ್ಲ ಎಂದು ಸಂಘಟನೆಗಳು ಆರೋಪಿಸಿವೆ. ಈ ಹಿನ್ನೆಲೆ ತಮ್ಮ ಧ್ವನಿ ಕೇಳಿಸುವ ಉದ್ದೇಶದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ನವೆಂಬರ್ 7ರಿಂದ ಪ್ರಾಣಿ ಕಲ್ಯಾಣ ಸಂಘಟನೆಗಳು ಸಲ್ಲಿಸಿರುವ ಹಸ್ತಕ್ಷೇಪ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ಧ್ವನಿ ಕೇಂದ್ರ ಮಟ್ಟಕ್ಕೆ ತಲುಪಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಉದ್ದೇಶಿಸಿ ಪೋಸ್ಟಲ್ ಚಳವಳಿ ನಡೆಸಲಾಗಿದೆ. ಇದು ಪ್ರಜಾಪ್ರಭುತ್ವ ದೇಶವಾಗಿರುವುದರಿಂದ, ನಾಗರಿಕರು ಮತ್ತು ಪ್ರಾಣಿ ಕಲ್ಯಾಣ ಸಂಘಟನೆಗಳ ಮನವಿಗಳನ್ನು ನ್ಯಾಯಾಲಯ ಆಲಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸೊಸೈಟಿ ಫಾರ್ ದಿ ಪ್ರಿವೆನ್ಷನ್ ಆಫ್ ಕ್ರೂಯಲ್ಟಿ ಟು ಅನಿಮಲ್ಸ್‌ನ ದಿನೇಶ್ ಪೈ ಹಾಗೂ ಹರೀಶ್ ರಾಜ್ ಕುಮಾರ್, ಪಶುವೈದ್ಯರಾದ ಡಾ. ಯಶಸ್ವೀ ನಾರಾವಿ, ಪ್ರಾಣಿ ರಕ್ಷಕರಾದ ರಜನಿ ಶೆಟ್ಟಿ ಹಾಗೂ ಡಾ. ಶೃತಿ ರಾವ್ ಉಪಸ್ಥಿತರಿದ್ದರು.