ಮಂಗಳೂರು: ಮಂಗಳೂರಿನ ಒಮೇಗಾ ಆಸ್ಪತ್ರೆಯಲ್ಲಿ 35 ವರ್ಷ ಹಳೆಯ ಪೇಸ್‌ಮೇಕರ್ ತಂತಿಯನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಯಶಸ್ವಿಯಾಗಿ ಹೊರತೆಗೆಯುವ ಪ್ರಕ್ರಿಯೆ ಸಂಪೂರ್ಣಗೊಂಡಿತು. ಈ ಕುರಿತು ವೈದ್ಯಕೀಯ ತಂಡದ ಹಿರಿಯ ಹೃದ್ರೋಗ ತಜ್ಞ ಡಾ. ಕೆ. ಮುಕುಂದ್ ಮಾಹಿತಿ ನೀಡಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಮಾರು ಒಂದು ವರ್ಷದಿಂದ ನಿರಂತರ ಜ್ವರದಿಂದ ಬಳಲುತ್ತಿದ್ದ 68 ವರ್ಷದ ಕಲ್ಲಿಕೋಟೆಯ ಬೇಬಿ ಆಗಸ್ಟಿನ್ ಅವರ ಪೇಸ್‌ಮೇಕರ್ ತಂತಿಯಲ್ಲಿ ತೊಂದರೆ ಕಂಡುಬಂದಿದ್ದು, ಅದಕ್ಕಾಗಿ ನಾವು ತಾಂತ್ರಿಕ ಶಸ್ತ್ರಚಿಕಿತ್ಸೆ ರಹಿತ ಪ್ರಕ್ರಿಯೆಯನ್ನು ರೂಪಿಸಿದೆವು. ಶಸ್ತ್ರಚಿಕಿತ್ಸೆ ಇಲ್ಲದೆ, ವಿಶೇಷ ತಂತ್ರಜ್ಞಾನ ಬಳಸಿ 35 ವರ್ಷ ಹಳೆಯ ತಂತಿಯನ್ನು ಹೊರತೆಗೆದು ಹಾಕುವುದು ಅತ್ಯಂತ ಸಂಕೀರ್ಣ ಹಾಗೂ ಅಪರೂಪದ ಚಿಕಿತ್ಸೆಯಾಗಿದ್ದು, ಇದು ಕ್ಯಾಥ್ ಲ್ಯಾಬ್‌ನಲ್ಲಿ ಒಂದು ಗಂಟೆಯೊಳಗೆ ಯಶಸ್ವಿಯಾಗಿ ಪೂರ್ಣಗೊಂಡಿತು. ರೋಗಿಯ ಸುರಕ್ಷತೆಯನ್ನು ಡಾ. ಮೇಘನಾ ಮುಕುಂದ್ ನೋಡಿಕೊಂಡರು. ಈ ಪ್ರಕ್ರಿಯೆಯಿಂದ ರೋಗಿಯು ಕ್ಷಿಪ್ರವಾಗಿ ಚೇತರಿಸಿಕೊಂಡು, ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದೆ ಆರೋಗ್ಯವಾಗಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎಲೆಕ್ಟ್ರೊಫಿಸಿಯಾಲಜಿಸ್ಟ್ ಡಾ. ಯಾಜಿಕ್ ಮುಕುಂದ್ ಅರಿವಳಿಕೆ ತಜ್ಞೆ ಡಾ. ಮೇಘನಾ ಮುಕುಂದ್ ಹಾಗೂ ಡಾ. ಅಭಿಜಿತ್ ಉಪಸ್ಥಿತರಿದ್ದರು.