ಶಬರಿಮಲೆಯಲ್ಲಿ ಮಕರವಿಳಕ್ಕು ತೀರ್ಥಯಾತ್ರೆ ಆರಂಭ

ಶಬರಿಮಲೆ (ಕೇರಳ): ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಮಕರವಿಳಕ್ಕು ತೀರ್ಥಯಾತ್ರೆ ಮಂಗಳವಾರ ಸಂಜೆ 5 ಗಂಟೆಗೆ ಅಧಿಕೃತವಾಗಿ ಆರಂಭವಾಯಿತು. ತಂತ್ರಿ (ಪ್ರಧಾನ ಅರ್ಚಕ) ಮಹೇಶ್ ಮೋಹನರ್ ಅವರ ಸಮ್ಮುಖದಲ್ಲಿ ಮೇಲ್ಶಾಂತಿ (ಪ್ರಧಾನ ಅರ್ಚಕ) ಇ.ಟಿ. ಪ್ರಸಾದ್ ಅವರು ದೇವಾಲಯದ ಬಾಗಿಲುಗಳನ್ನು ತೆರೆಯುವ ಮೂಲಕ ವಿಧಿವಿಧಾನಗಳಿಗೆ ಚಾಲನೆ ನೀಡಿದರು.

ದೇವಾಲಯ ತೆರೆಯುವ ಮೊದಲು ಮಲಿಕಾಪ್ಪುರಂ ಮೇಲ್ಶಾಂತಿ ಮನು ನಂಬೂದಿರಿ ಅವರು ಅಯ್ಯಪ್ಪ ವಿಗ್ರಹದಿಂದ ಪವಿತ್ರ ವಿಭೂತಿ ಮತ್ತು ಗರ್ಭಗುಡಿಯ ಕೀಲಿಯನ್ನು ಸ್ವೀಕರಿಸಿದರು. ಬಳಿಕ ಗರ್ಭಗುಡಿ ತೆರೆಯುವ ಮುನ್ನ ಗಣೇಶ ಹಾಗೂ ನಾಗರಾಜನಿಗೆ ಸಾಂಪ್ರದಾಯಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಪವಿತ್ರ ಅಗ್ನಿಯನ್ನು ಬೆಳಗಿಸಿದ ನಂತರ ಭಕ್ತರಿಗೆ ದರ್ಶನಕ್ಕಾಗಿ ಪವಿತ್ರ 18 ಮೆಟ್ಟಿಲುಗಳನ್ನು ಹತ್ತಲು ಅವಕಾಶ ನೀಡಲಾಯಿತು. ಈ ಸಂದರ್ಭದಲ್ಲಿ ಶಬರಿಮಲೆ ಕಾರ್ಯನಿರ್ವಾಹಕ ಅಧಿಕಾರಿ ಒ.ಜಿ. ಬಿಜು ಹಾಗೂ ಆಡಳಿತಾಧಿಕಾರಿ ಎಸ್. ಶ್ರೀನಿವಾಸ್ ಸೇರಿದಂತೆ ದೇವಾಲಯದ ಪ್ರಮುಖ ಅಧಿಕಾರಿಗಳು ಪೂಜಾ ವಿಧಿಗಳಲ್ಲಿ ಪಾಲ್ಗೊಂಡರು.

41 ದಿನಗಳ ಮಂಡಲ ಪೂಜೆ ಉತ್ಸವ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಡಿಸೆಂಬರ್ 27ರಂದು ದೇವಾಲಯವನ್ನು ಮುಚ್ಚಲಾಗಿತ್ತು. ಇದೀಗ ಮಕರವಿಳಕ್ಕು ತೀರ್ಥಯಾತ್ರೆಯ ಅಂಗವಾಗಿ ದೇವಾಲಯವನ್ನು ಪುನಃ ತೆರೆಯಲಾಗಿದೆ. ಜನವರಿ 14ರಂದು ಮಕರವಿಳಕ್ಕು ಹಬ್ಬವನ್ನು ಆಚರಿಸಲಾಗುವುದು.

ಅಧಿಕಾರಿಗಳ ಮಾಹಿತಿ ಪ್ರಕಾರ, ಜನವರಿ 19ರಂದು ರಾತ್ರಿ 11 ಗಂಟೆಯವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರಲಿದೆ. ನಂತರ ಜನವರಿ 20ರಂದು ಬೆಳಿಗ್ಗೆ 6.30ಕ್ಕೆ ದೇವಾಲಯವನ್ನು ಮುಚ್ಚಲಾಗುವುದು.

error: Content is protected !!