ತಿರುವನಂತಪುರಂ: ಕೇರಳ ರಾಜ್ಯ ಸರ್ಕಾರದ ‘ಸುವರ್ಣ ಕೇರಳಂ’ ಲಾಟರಿ ಟಿಕೆಟ್‌ನಲ್ಲಿ ಮುದ್ರಿಸಲಾದ ಚಿತ್ರವೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ಟಿಕೆಟ್‌ನಲ್ಲಿರುವ ಚಿತ್ರವು ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ಆರೋಪಿಸಿ ಬಿಜೆಪಿ ಹಾಗೂ ವಿವಿಧ ಹಿಂದೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಹಿಂದೂ ಐಕ್ಯ ವೇದಿಯ ರಾಜ್ಯಾಧ್ಯಕ್ಷ ಆರ್.ವಿ. ಬಾಬು ಅವರು ಈ ಕುರಿತು ತಿರುವನಂತಪುರಂ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಲಾಟರಿ ಟಿಕೆಟ್‌ನಲ್ಲಿ ಶಿವಲಿಂಗಕ್ಕೆ ಮುಟ್ಟಿನ ರಕ್ತ ಹರಿಯುವಂತೆ ಕಾಣುವ ಚಿತ್ರವಿದೆ ಎಂಬ ಆರೋಪವನ್ನು ಸಂಘಟನೆಗಳು ಮುಂದಿಟ್ಟಿದ್ದು, ಇದು ಶಿವ ಭಕ್ತರನ್ನು ಅವಮಾನಿಸುವುದಕ್ಕೆ ಸಮ ಎಂದು ಆರೋಪಿಸಲಾಗಿದೆ.
ಜನವರಿ 2, 2026ರಂದು ನಡೆಯಲಿರುವ ಎಸ್‌ಕೆ–34 ಸರಣಿಯ ಈ ಲಾಟರಿ 12 ಸರಣಿಗಳಲ್ಲಿ ಬಿಡುಗಡೆಗೊಂಡಿದ್ದು, ಈಗಾಗಲೇ ಹತ್ತಾರು ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ. ಒಂದು ಕೋಟಿ ರೂ. ಬಹುಮಾನ ಹೊಂದಿರುವ ಈ ಲಾಟರಿ ಟಿಕೆಟ್‌ನಲ್ಲಿರುವ ಚಿತ್ರವು ‘ಆರ್ಪೋ ಮುಟ್ಟಿನ’ ಚಳವಳಿಯ ವೇಳೆ ಕಾಣಿಸಿಕೊಂಡ ವಿವಾದಾತ್ಮಕ ಗೇಟ್ ಮಾದರಿಯನ್ನು ಹೋಲುತ್ತದೆ ಎಂಬ ಆರೋಪಗಳೂ ಕೇಳಿಬಂದಿವೆ.

ಲಾಟರಿ ಟಿಕೆಟ್‌ನಲ್ಲಿರುವ ಚಿತ್ರವು ಲಲಿತ ಕಲಾ ಅಕಾಡೆಮಿಯ ಸಂಗ್ರಹದಲ್ಲಿರುವ ಕಲಾಕೃತಿಯಿಂದ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಹಿಂದೂ ಐಕ್ಯ ವೇದಿ ರಾಜ್ಯಾಧ್ಯಕ್ಷ ಆರ್.ವಿ. ಬಾಬು, ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವು ಹಿಂದೂ ನಂಬಿಕೆಗಳನ್ನು ನಿರಂತರವಾಗಿ ಅವಮಾನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದರಿಂದ ಹಿಂದೂ ಸಮುದಾಯ ಎಚ್ಚೆತ್ತುಕೊಳ್ಳದಿದ್ದರೆ ಅದು ಸ್ವಯಂ ವಿನಾಶಕ್ಕೆ ಕಾರಣವಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಡ್ವೊಕೇಟ್ ಎಸ್. ಸುರೇಶ್ ಅವರು ಫೇಸ್‌ಬುಕ್ ಪೋಸ್ಟ್ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ‘ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮಾಡುವ ಪ್ರವೃತ್ತಿಯನ್ನು ತಕ್ಷಣ ನಿಲ್ಲಿಸಬೇಕು’ ಎಂದು ಆಗ್ರಹಿಸಿದ್ದಾರೆ. ಈ ಲಾಟರಿ ಟಿಕೆಟ್‌ನಲ್ಲಿ ಮುದ್ರಿಸಲಾದ ಚಿತ್ರವು ಭಕ್ತರನ್ನು ಅವಮಾನಿಸುವಂತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ವಿವಾದ ಮುಂದುವರಿದಿರುವ ನಡುವೆ, ಮುಂಬರುವ ಚುನಾವಣೆಯಲ್ಲಿ ಈ ವಿಷಯ ಪ್ರಮುಖ ರಾಜಕೀಯ ಚರ್ಚೆಯ ವಿಷಯವಾಗುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.