ಬಂಟ್ವಾಳ: ಅಸ್ಸಾಂ ರಾಜ್ಯದ ಬೊಂಗೈಗಾಂವ್ ಧರ್ಮಕ್ಷೇತ್ರದಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸೂರಿಕುಮೇರು ನಿವಾಸಿ ವಂದನೀಯ ಫಾದರ್ ಫೆಲಿಕ್ಸ್ ಲಿಯೋ ಪಿಂಟೊ (57) ಅವರು ಅಸೌಖ್ಯದಿಂದ ಡಿಸೆಂಬರ್ 30ರಂದು ಮುಂಜಾನೆ ನಿಧನರಾದರು.

ಫಾದರ್ ಫೆಲಿಕ್ಸ್ ಲಿಯೋ ಪಿಂಟೊ ಅವರು ಬೊನವೆಂಚರ್ ಪಿಂಟೊ ಹಾಗೂ ಆಲಿಸ್ ಪಿಂಟೊ ದಂಪತಿಯ ಪುತ್ರರಾಗಿ 1968ರ ಫೆಬ್ರವರಿ 28ರಂದು ಜನಿಸಿದ್ದರು. ಬಾಲ್ಯದಿಂದಲೇ ಧಾರ್ಮಿಕತೆ, ಶಿಸ್ತು ಹಾಗೂ ಸೇವಾಭಾವನೆಯನ್ನು ಜೀವನದ ಮೌಲ್ಯಗಳಾಗಿ ಅಳವಡಿಸಿಕೊಂಡು ಬೆಳೆದಿದ್ದರು.
ಧಾರ್ಮಿಕ ಜೀವನವನ್ನು ಆರಿಸಿಕೊಂಡ ಫಾದರ್ ಫೆಲಿಕ್ಸ್ ಲಿಯೋ ಪಿಂಟೊ ಅವರು 2003ರ ಮೇ 1ರಂದು ಗುರುದೀಕ್ಷೆ ಪಡೆದಿದ್ದರು. ಬಳಿಕ ಅಸ್ಸಾಂನ ಬೊಂಗೈಗಾಂವ್ ಧರ್ಮಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ, ಜನಸಾಮಾನ್ಯರ ಸೇವೆಗೆ ತಮ್ಮ ಜೀವನವನ್ನು ಸಮರ್ಪಿಸಿದ್ದರು.
ಸರಳ ಸ್ವಭಾವ, ಮೃದು ಮಾತು, ಪ್ರೀತಿ ಹಾಗೂ ಜನರ ಮೇಲಿನ ಕಾಳಜಿಯಿಂದ ಗುರುತಿಸಿಕೊಂಡಿದ್ದ ಅವರು ಧರ್ಮೋಪದೇಶ, ಸಮಾಜಸೇವೆ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಅನೇಕ ವಿಶ್ವಾಸಿಗಳಿಗೆ ಮಾರ್ಗದರ್ಶಕರಾಗಿದ್ದರು. ಅವರು ಸೇವೆ ಸಲ್ಲಿಸಿದ ಎಲ್ಲ ಸ್ಥಳಗಳಲ್ಲಿಯೂ ತಮ್ಮ ವಿನಮ್ರತೆ ಮತ್ತು ಆತ್ಮೀಯತೆಯಿಂದ ಜನಾನುರಾಗಿಯಾಗಿದ್ದರು.
ಮೃತರು ತಂದೆ ಬೊನವೆಂಚರ್ ಪಿಂಟೊ, ಸಹೋದರ ವಿಕ್ಟರ್ ಪಿಂಟೊ, ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.