ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿವಾಸವನ್ನು ಗುರಿಯಾಗಿಸಿಕೊಂಡು ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂಬ ವರದಿಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನಡೆಯುತ್ತಿರುವ ರಷ್ಯಾ–ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಎರಡೂ ರಾಷ್ಟ್ರಗಳು ರಾಜತಾಂತ್ರಿಕ ಪ್ರಯತ್ನಗಳತ್ತ ಗಮನಹರಿಸಬೇಕು ಈ ಮಧ್ಯೆ ‘ಶಾಂತಿ ಮಾತುಕತೆ ಹಾಳು ಮಾಡಬೇಡಿ’ ಎಂದು ಅವರು ಉಕ್ರೇನ್‌ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, “ರಷ್ಯಾ ಅಧ್ಯಕ್ಷರ ನಿವಾಸವನ್ನು ಗುರಿಯಾಗಿಸಿಕೊಂಡಿರುವ ವರದಿಗಳು ತೀವ್ರ ಕಳವಳ ಮೂಡಿಸುತ್ತವೆ. ಯುದ್ಧವನ್ನು ಕೊನೆಗೊಳಿಸಿ ಶಾಂತಿಯನ್ನು ಸಾಧಿಸಲು ರಾಜತಾಂತ್ರಿಕ ಪ್ರಯತ್ನಗಳೇ ಅತ್ಯಂತ ಪರಿಣಾಮಕಾರಿ ಮಾರ್ಗ. ಇಂತಹ ಪ್ರಯತ್ನಗಳನ್ನು ದುರ್ಬಲಗೊಳಿಸುವ ಯಾವುದೇ ಕ್ರಮಗಳನ್ನು ತಪ್ಪಿಸಬೇಕು” ಎಂದು ಹೇಳಿದ್ದಾರೆ.
ಫೆಬ್ರವರಿ 2022ರಲ್ಲಿ ಆರಂಭವಾದ ರಷ್ಯಾ–ಉಕ್ರೇನ್ ಯುದ್ಧದ ಬಳಿಕ ಪ್ರಧಾನಿ ಮೋದಿ ನಿರಂತರವಾಗಿ ಸಂವಾದ ಮತ್ತು ರಾಜತಾಂತ್ರಿಕ ಪರಿಹಾರಗಳ ಪರವಾಗಿ ನಿಲುವು ತಾಳುತ್ತಿದ್ದಾರೆ.
ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ಸೋಮವಾರ, ಮಾಸ್ಕೋ ಮತ್ತು ಸೇಂಟ್ ಪೀಟರ್ಸ್ಬರ್ಗ್ ನಡುವಿನ ನವ್ಗೊರೊಡ್ ಪ್ರದೇಶದಲ್ಲಿರುವ ಪುಟಿನ್ ಅವರ “ಅಧಿಕೃತ ನಿವಾಸ”ದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂದು ಆರೋಪಿಸಿದ್ದರು. ಅವರ ಪ್ರಕಾರ, 91 ಡ್ರೋನ್‌ಗಳನ್ನು ರಷ್ಯಾ ರಕ್ಷಣಾ ಪಡೆಗಳು ತಡೆಹಿಡಿದು ಹೊಡೆದುರುಳಿಸಿದ್ದು, ಯಾವುದೇ ಹಾನಿ ಅಥವಾ ಸಾವುನೋವು ಸಂಭವಿಸಿಲ್ಲ. ಈ ದಾಳಿಯ ಹಿನ್ನೆಲೆಯಲ್ಲಿ, ಯುದ್ಧ ವಿರಾಮ ಹಾಗೂ ಶಾಂತಿ ಮಾತುಕತೆಗಳ ಕುರಿತು ರಷ್ಯಾದ ನಿಲುವನ್ನು ಮರುಪರಿಶೀಲಿಸಲಾಗುತ್ತಿದೆ ಎಂದು ಲಾವ್ರೊವ್ ಹೇಳಿದ್ದರು.
ಉಕ್ರೇನ್‌ನ ತಿರಸ್ಕಾರ
ಆದರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ಆರೋಪವನ್ನು ತಿರಸ್ಕರಿಸಿದ್ದು, ಇದನ್ನು “ರಷ್ಯಾದ ವಿಶಿಷ್ಟ ಸುಳ್ಳು” ಎಂದು ಕರೆದಿದ್ದಾರೆ. ಶಾಂತಿ ಮಾತುಕತೆಗಳನ್ನು ದುರ್ಬಲಗೊಳಿಸಿ, ಉಕ್ರೇನ್ ಮೇಲೆ ಹೊಸ ದಾಳಿಗಳನ್ನು ಸಮರ್ಥಿಸಲು ಈ ಕಥೆಯನ್ನು ರಚಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
“ರಷ್ಯಾ ಅಧ್ಯಕ್ಷ ಟ್ರಂಪ್ ಅವರ ತಂಡದೊಂದಿಗೆ ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳನ್ನು ಹಾಳುಮಾಡಲು ಅಪಾಯಕಾರಿ ಹೇಳಿಕೆಗಳನ್ನು ಬಳಸುತ್ತಿದೆ. ‘ನಿವಾಸ ದಾಳಿ’ ಕಟ್ಟುಕಥೆಯಾಗಿದೆ”
ಎಂದು ಝೆಲೆನ್ಸ್ಕಿ X ನಲ್ಲಿ ಬರೆದಿದ್ದಾರೆ.
ಟ್ರಂಪ್ ಪ್ರತಿಕ್ರಿಯೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಝೆಲೆನ್ಸ್ಕಿಯನ್ನು ಭೇಟಿಯಾಗುವ ಕೆಲ ಗಂಟೆಗಳ ಮೊದಲು ಪುಟಿನ್ ಅವರೊಂದಿಗೆ ಮಾತನಾಡಿದ್ದು, ಈ ದಾಳಿಯ ಬಗ್ಗೆ ತಿಳಿದುಕೊಂಡಿರುವುದಾಗಿ ಹೇಳಿದ್ದಾರೆ. “ನನಗೆ ಇದು ಇಷ್ಟವಿಲ್ಲ. ಇದು ಸರಿಯಾದ ಸಮಯವಲ್ಲ. ಮನೆಯ ಮೇಲೆ ದಾಳಿ ಮಾಡುವುದು ಒಪ್ಪಲಾಗದ ಸಂಗತಿ” ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಆದರೆ ನಂತರ ಝೆಲೆನ್ಸ್ಕಿಯೊಂದಿಗಿನ ಮಾತುಕತೆ ಬಳಿಕ, ಶಾಂತಿ ಒಪ್ಪಂದ ಬಹಳ ಹತ್ತಿರದಲ್ಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಶಾಂತಿ ಮಾತುಕತೆ ಇನ್ನೂ ಗೊಂದಲದಲ್ಲೇ
ಯುದ್ಧಾನಂತರದ ಇತ್ಯರ್ಥದ ಕುರಿತು ಭದ್ರತಾ ಖಾತರಿ, ಭೂಪ್ರದೇಶ ವಿವಾದ, ಹಾಗೂ ರಷ್ಯಾ ಆಕ್ರಮಿತ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಭವಿಷ್ಯ ಇನ್ನೂ ಬಗೆಹರಿಯದೆ ಉಳಿದಿದೆ. ಪೂರ್ವ ಉಕ್ರೇನ್‌ನ ಡೊನೆಟ್ಸ್ಕ್ ಪ್ರದೇಶದ ಸಂಪೂರ್ಣ ನಿಯಂತ್ರಣಕ್ಕಾಗಿ ಪುಟಿನ್ ಒತ್ತಾಯಿಸುತ್ತಿದ್ದಾರೆ. ಪುಟಿನ್ ನಿವಾಸದ ಮೇಲೆ ದಾಳಿ ನಡೆದಿದೆ ಎಂಬ ಆರೋಪ ಮತ್ತು ಅದರ ಮೇಲೆ ಉಂಟಾದ ಪರಸ್ಪರ ಪ್ರತಿಕ್ರಿಯೆಗಳು, ಉಕ್ರೇನ್‌ನಲ್ಲಿ ಶಾಶ್ವತ ಶಾಂತಿಯ ನಿರೀಕ್ಷೆಗಳಿಗೆ ಹೊಸ ಆಘಾತ ತಂದಿವೆ.