ನವದೆಹಲಿ: ಕಾಂಗ್ರೆಸ್ ನಾಯಕಿ , ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾ ಬಹುಕಾಲದ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 25 ವರ್ಷದ ರೈಹಾನ್, ತಮ್ಮ ಗೆಳತಿ ಅವಿವಾ ಬೇಗ್ ಅವರೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಅವಿವಾ ಬೇಗ್ ಮತ್ತು ಅವರ ಕುಟುಂಬ ದೆಹಲಿಯಲ್ಲಿ ನೆಲೆಸಿದ್ದು, ರೈಹಾನ್–ಅವಿವಾ ಕುಟುಂಬಗಳು ಪರಸ್ಪರ ನಿಕಟ ಸಂಪರ್ಕ ಹೊಂದಿವೆ ಎಂದು ತಿಳಿದುಬಂದಿದೆ. ಇಬ್ಬರ ವಿವಾಹಕ್ಕೆ ಎರಡೂ ಕುಟುಂಬಗಳೂ ಒಪ್ಪಿಗೆ ಸೂಚಿಸಿರುವುದಾಗಿ ವರದಿಯಾಗಿದೆ. ರೈಹಾನ್ ಮತ್ತು ಅವಿವಾ ಕಳೆದ ಏಳು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಆದರೆ ವಿವಾಹ ದಿನಾಂಕದ ಕುರಿತು ಇನ್ನೂ ಯಾವುದೇ ಅಧಿಕೃತ ಘೋಷಣೆ ನಡೆದಿಲ್ಲ.
ವೃತ್ತಿಪರವಾಗಿ ರೈಹಾನ್ ವಾದ್ರಾ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದು, ವನ್ಯಜೀವಿ ಹಾಗೂ ವಾಣಿಜ್ಯ (ಕಮರ್ಷಿಯಲ್) ಛಾಯಾಗ್ರಹಣ ಕ್ಷೇತ್ರದಲ್ಲಿ ಗಮನ ಸೆಳೆದಿದ್ದಾರೆ. ಇತ್ತ ಅವಿವಾ ಬೇಗ್ ಕೂಡ ಛಾಯಾಗ್ರಾಹಕಿ ಹಾಗೂ ನಿರ್ಮಾಪಕಿ ಆಗಿದ್ದು, ದೆಹಲಿಯಲ್ಲಿ ‘ಅಟೆಲಿಯರ್ 11’ ಎಂಬ ಫೋಟೋಗ್ರಫಿ ಸ್ಟುಡಿಯೋವನ್ನು ನಡೆಸುತ್ತಿದ್ದಾರೆ.
ಇದರ ಜೊತೆಗೆ, ಅವಿವಾ ಬೇಗ್ ರಾಷ್ಟ್ರಮಟ್ಟದ ಮಾಜಿ ಫುಟ್ಬಾಲ್ ಆಟಗಾರ್ತಿ ಎಂಬುದು ವಿಶೇಷವಾಗಿದೆ. ರಾಜಕೀಯ ಹಿನ್ನೆಲೆಯ ಕುಟುಂಬದ ಈ ನಿಶ್ಚಿತಾರ್ಥ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.