ʻಡ್ರೀಮ್ʼ ನನಸು ಮಾಡಲು ಲಕ್ಕಿ ಸ್ಕೀಮ್‌ಗೆ ಹಣ ಕಟ್ಟಿ ಕೈ ಸುಟ್ಟುಕೊಂಡ ಗ್ರಾಹಕರು!

ಮಂಗಳೂರು: ಡ್ರೀಮ್‌ ಡೀಲ್‌ನವರು ಹೆಚ್ಚಾಗಿ ಗ್ರಾಮಾಂತರ ಪ್ರದೇಶದವರನ್ನೇ ʻಡೀಲ್‌ʼ ಮಾಡಿರುವುದು ಬೆಳಕಿಗೆ ಬರುತ್ತಿದ್ದು, 20 ಕಂತು ಮುಗಿದರೂ ಹಣವನ್ನೂ ವಾಪಸ್‌ ಮಾಡಿಲ್ಲ, ಲಕ್ಕಿ ಡ್ರಾದಲ್ಲಿ ಸಿಕ್ಕ ಗಿಫ್ಟನ್ನೂ ಕೊಟ್ಟಿಲ್ಲ ಎಂಬ ಆರೋಪ ಗ್ರಾಹಕರ ಕಡೆಯಿಂದ ಬಂದಿದೆ.

ಮುಖ್ಯವಾಗಿ ಸುಳ್ಯ, ಪುತ್ತೂರುವಿನಂತಹ ಗ್ರಾಮಾಂತರ ಪ್ರದೇಶದ ಮುಗ್ಧ ಜನರೇ ಹೆಚ್ಚಾಗಿ ಡ್ರೀಂ ಡೀಲ್‌ ಗ್ರಾಹಕರಾಗಿದ್ದು, ಇದುವರೆಗೂ ಕಟ್ಟಿದ ಹಣವಾಗಲೀ, ಹಣದ ಮೌಲ್ಯಕ್ಕೆ ತಕ್ಕ ಉಡುಗೊರೆಯಾಗಲೀ ಅಥವಾ ಲಕ್ಕಿಡ್ರಾದಲ್ಲಿ ವಿಜೇತರಾದವರಿಗೆ ಮನೆಗಳಾಗಲೀ ಸಿಕ್ಕಿಲ್ಲ ಎನ್ನುವುದು ಒಂದೊಂದಾಗಿ ಬಹಿರಂಗವಾಗಲಾರಂಭಿಸಿದೆ.

ಈಗಾಗಲೇ 20 ತಿಂಗಳ ಕಾಲವೂ ಸರಿಯಾಗಿ ತಲಾ ಒಂದೊಂದು ಸಾವಿರದಂತೆ ಕಟ್ಟಿದವರಿಗೂ ಹಣವಾಗಲೀ ಗಿಫ್ಟ್‌ ಆಗಲೀ ಸಿಗದೆ ಮೋಸ ಹೋಗಿದ್ದಾಗಿ ವಾಯ್ಸ್‌ ಆಫ್‌ ಪಬ್ಲಿಕ್‌ ಜೊತೆ ಸಂಪರ್ಕಿಸಿ ಹಲವು ಮಂದಿ ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ.

ಡ್ರೀಂ ಡೀಲ್‌ ಗ್ರಾಹಕರಿಗೆ ಮನೆಗಳನ್ನು ಕೊಡುತ್ತಿಲ್ಲ, ಕರೆ ಮಾಡಿದರೆ ಡ್ರೀಂ ಡೀಲ್‌ ಸಂಸ್ಥೆಯವರಾಗಲೀ, ಏಜೆಂಟರಾಗಲೀ ಯಾರೂ ಕೂಡಾ ಸ್ವೀಕರಿಸುತ್ತಿಲ್ಲಎಂದು ಗ್ರಾಹಕರು ಈ ಮುಂಚೆಯೇ ವಾಯ್ಸ್‌ ಆಫ್‌ ಪಬ್ಲಿಕ್‌ ಜೊತೆ ಅಳಲು ತೋಡಿಕೊಂಡಿದ್ದರು. ಇದನ್ನು ಆಧರಿಸಿ ವರದಿಯನ್ನು ಪ್ರಕಟಿಸಿತ್ತು. ಇದಾದ ಬೆನ್ನಲ್ಲೇ ಸುಳ್ಯ, ಪುತ್ತೂರು ಭಾಗದಿಂದ ಅನೇಕ ಮಂದಿ ವಾಯ್ಸ್‌ ಆಫ್‌ ಪಬ್ಲಿಕ್‌ ಮೀಡಿಯಾವನ್ನು ಸಂಪರ್ಕಿಸುತ್ತಿದ್ದು, ತಮಗೂ ಮೋಸವಾಗಿದೆ ಎಂದು ಹೇಳಿಕೊಳ್ಳಲಾರಂಭಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಈಗಾಗಲೇ ಹಲವಾರು ಮಂದಿ ಗ್ರಾಹಕರು ದಾಖಲೆ ಸಮೇತ ತಮ್ಮನ್ನು ಸಂಪರ್ಕಿಸಿದ್ದಾರೆ. ಗ್ರಾಹಕರ ಒತ್ತಡ ತಾಳಲಾರದೆ ಡ್ರೀಂ ಡೀಲ್‌ ಕಂಪೆನಿಯ ಪ್ರತಿನಿಧಿಗಳು ಕೆ.ಸಿ.ರೋಡ್‌ ಬಳಿ ಮನೆ ನಿರ್ಮಾಣಕ್ಕೆ ಪಿಲ್ಲರ್‌ ತೆಗೆದ ಗುಂಡಿಯನ್ನು ತೋರಿಸುತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ರೀಲ್ಸ್‌ ಹಾಕಿ ʻನುಡಿದಂತೆ ನಡೆಯುತ್ತಿದ್ದೇವೆʼ ಎಂದು ಹೇಳುತ್ತಿದ್ದಾರೆಯೇ ಹೊರತು, ನುಡಿದಂತೆ ನಡೆದಿಲ್ಲ ಎಂದು ಹಲವರು ಗ್ರಾಹಕರು ಮಾಹಿತಿ ನೀಡಿದ್ದಾರೆ.

ಡ್ರೀಂ ಡೀಲ್‌ ಸಂಸ್ಥೆಗೆ ಏನೋ ಸಮಸ್ಯೆಯಾಗಿ ಮನೆ ಕೊಡುವ ವಿಚಾರದಲ್ಲಿ ವಿಳಂಬವಾಗಿರಬಹುದೆಂಬ ದೃಷ್ಟಿಯಿಂದ ಗ್ರಾಹಕರು ಸುಮ್ಮನಾಗಿದ್ದರು. ಆದರೆ ಇದೀಗ ಡ್ರೀಂ ಡೀಲ್‌ ಸಂಸ್ಥೆಯಿಂದ ಇನ್ನಷ್ಟು ಗ್ರಾಹಕರು ತೊಂದರೆಗೊಳಗಾಗಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ವಾಯ್ಸ್‌ ಆಫ್‌ ಪಬ್ಲಿಕ್‌ ಮುಂದೆ ಗ್ರಾಹಕರು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇದರ ವಿಡಿಯೋ, ದಾಖಲೆ ಸಮೇತ ವಾಯ್ಸ್‌ ಆಫ್‌ ಪಬ್ಲಿಕ್‌ ವರದಿ ಮಾಡಲಿದೆ.

error: Content is protected !!