ಪುಂಜಾಲಕಟ್ಟೆ ಅಪಘಾತ: ಬೈಕ್ ಸವಾರ ಸಾವು; ಕಾರ್ ಚಾಲಕ ಮದ್ಯಪಾನ ಆರೋಪ – ಆಲ್ಕೋಮೀಟರ್ ಪರೀಕ್ಷೆಯಲ್ಲಿ ನೆಗೆಟಿವ್

ಬಂಟ್ವಾಳ: ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಕಟ್ಟೆಮನೆ ಬಳಿ ನಿನ್ನೆ ಮಧ್ಯಾಹ್ನ ನ್ಯಾನೋ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆಗೆ ಸಂಬಂಧಿಸಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಅಪಘಾತದ ಬಳಿಕ ಕಾರು ಚಾಲಕ ಮದ್ಯಪಾನ ಸ್ಥಿತಿಯಲ್ಲಿ ಇದ್ದು, ಸ್ಥಳದಿಂದ ಪರಾರಿಯಾಗಿದ್ದಾನೆ ಎಂಬ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಾರು ಚಾಲಕನ ಆಲ್ಕೋಮೀಟರ್ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ನಬೈಲು ನಿವಾಸಿ ಇಮ್ರಾನ್ @ ಮೊಹಮ್ಮದ್ ತಾಹ ಮೃತಪಟ್ಟ ದುರ್ದೈವಿ. ದಕ್ಷಿಣ ಕನ್ನಡ ಜಿಲ್ಲಾ ಡಿ.ಸಿ.ಆರ್.ಇ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಸನ್ನ ಅಪಘಾತಕ್ಕೆ ಕಾರಣನಾದ ಕಾರು ಚಾಲಕನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಮಾಹಿತಿಯಂತೆ, ಪ್ರಸನ್ನ ಚಾಲನೆ ಮಾಡುತ್ತಿದ್ದ KA-20-Z-6105 ನೊಂದಣಿಯ ನ್ಯಾನೋ ಕಾರು ಹಾಗೂ ಇಮ್ರಾನ್ @ ಎಸ್.ಎ. ಮೊಹಮ್ಮದ್ ತಾಹ ಚಾಲನೆ ಮಾಡುತ್ತಿದ್ದ KA-19-HN-3709 ನೊಂದಣಿಯ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಇಮ್ರಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 88/2025 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ 281 ಹಾಗೂ 106(1) ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಇನ್ನೊಂದೆಡೆ, ಅಪಘಾತದ ವೇಳೆ ಕಾರು ಚಾಲನೆ ಮಾಡುತ್ತಿದ್ದ ಆರೋಪಿ ಪ್ರಸನ್ನ ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ವಾಹನ ಚಲಾಯಿಸಿದ್ದಾನೆ ಎಂಬ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ, ಪುಂಜಾಲಕಟ್ಟೆ ಠಾಣೆಯ ಪೊಲೀಸ್ ಉಪನಿರೀಕ್ಷಕರು ಆರೋಪಿಯ ಆಲ್ಕೋಮೀಟರ್ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಆರೋಪಿಯು ಮದ್ಯಪಾನ ಮಾಡಿರುವುದು ದೃಢಪಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರ ಸಂಬಂಧಿಕರು ಹಾಗೂ ವಿಡಿಯೋ/ಆಡಿಯೋ ಪ್ರಸಾರ ಮಾಡಿದ ಮಹಿಳೆಯ ಸಮ್ಮುಖದಲ್ಲಿಯೂ ಮರು ಆಲ್ಕೋಮೀಟರ್ ಪರೀಕ್ಷೆ ನಡೆಸಲಾಗಿದ್ದು, ಅದಲ್ಲಿಯೂ ಮದ್ಯಪಾನದ ಯಾವುದೇ ಲಕ್ಷಣ ಪತ್ತೆಯಾಗಿಲ್ಲ.

ಆದರೂ, ಹೆಚ್ಚಿನ ಖಚಿತತೆಗೆ ಆರೋಪಿತನ ರಕ್ತಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ವರದಿ ಆಧಾರದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!