ಸೌಹಾರ್ದ ಸಮಾಜ ನಿರ್ಮಾಣಕ್ಕೆ ಉಲೇಮಾಗಳ ಮಾರ್ಗದರ್ಶನ ಅತ್ಯಗತ್ಯ: ಯು.ಟಿ. ಖಾದರ್ ಸಮಸ್ತ ಶತಮಾನೋತ್ಸವ ಶತಾಬ್ದಿ ಸಂದೇಶ ಯಾತ್ರೆ ಮಂಗಳೂರಿನಲ್ಲಿ ಸಮಾಪ್ತಿ

ಮಂಗಳೂರು: ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದ ನೆಲೆಸಬೇಕಾದರೆ ಉಲೇಮಾಗಳ ಮಾರ್ಗದರ್ಶನ ಅತ್ಯಗತ್ಯವಾಗಿದ್ದು, ಅವರ ಆಶಯ–ಆದರ್ಶಗಳಂತೆ ಜನರು ನಡೆದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ಸಮಸ್ತ ಕೇಂದ್ರೀಯ ಜಂಇಯ್ಯತುಲ್ ಉಲಮಾದ ಶತಮಾನೋತ್ಸವ ಅಂಗವಾಗಿ ನಗರದ ಅಡ್ಯಾರ್ ಕಣ್ಣೂರಿನ ಮೈದಾನದಲ್ಲಿ ಭಾನುವಾರ ಆಯೋಜಿಸಲಾದ ಶತಾಬ್ದಿ ಸಂದೇಶ ಯಾತ್ರೆಯ ಸಮಾರೋಪ ಮಹಾಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ತಮ್ಮ ತಮ್ಮ ಜಮಾಅತ್‌ನ ಖತೀಬ್ ಮತ್ತು ಇಮಾಮರ ಸಲಹೆ–ಸೂಚನೆಗಳನ್ನು ಪಾಲಿಸಬೇಕು. ಉಲೇಮಾಗಳ ಮಾರ್ಗದರ್ಶನ ಸಮಾಜಕ್ಕೆ ದಾರಿದೀಪವಾಗಿದ್ದು, ಅದನ್ನು ಕಡೆಗಣಿಸಿದರೆ ಸಮಾಜ ದಾರಿತಪ್ಪುವ ಸಾಧ್ಯತೆ ಇದೆ ಎಂದು ಯು.ಟಿ. ಖಾದರ್ ಎಚ್ಚರಿಸಿದರು. ಸಮಾಜದಲ್ಲಿ ಸೌಹಾರ್ದಕ್ಕೆ ಧಕ್ಕೆ ತರುವ ಯಾವುದೇ ಕೋಮುವಾದಿ ಶಕ್ತಿಗಳನ್ನು ಮಟ್ಟ ಹಾಕಲು ಎಲ್ಲರೂ ಕಟಿಬದ್ಧರಾಗಬೇಕು ಎಂದರು.

ಧರ್ಮವು ಮನುಷ್ಯನನ್ನು ವಿಭಜಿಸುವುದಲ್ಲ, ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗಬೇಕು. ಈ ದೃಷ್ಟಿಯಿಂದ ಉಲೇಮಾಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರ ಸಂದೇಶಗಳು ಸಮಾಜದ ಶಾಂತಿಗೆ ಭದ್ರ ಅಡಿಪಾಯ ಹಾಕುತ್ತವೆ ಎಂದು ಸ್ಪೀಕರ್ ಅಭಿಪ್ರಾಯಪಟ್ಟರು.

ಜಮಾಅತ್‌ನ ಆಶಯ–ಆದರ್ಶಗಳನ್ನು ಪಾಲಿಸಿ: ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್
ಸಮಾರಂಭದಲ್ಲಿ ಮಾತನಾಡಿದ ಸಮಸ್ತ ಅಧ್ಯಕ್ಷ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್, ಸುನ್ನತ್ ಜಮಾಅತ್‌ನ ಆಶಯ–ಆದರ್ಶಗಳನ್ನು ಪಾಲಿಸುವ ಮೂಲಕ ಸಮಸ್ತ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕೆಂದು ಕರೆ ನೀಡಿದರು. ಸಾದಾತುಗಳು ಕಟ್ಟಿಕೊಟ್ಟ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತರ ಮೇಲಿದೆ ಎಂದರು.

ಸ್ವಾಗತ ಸಮಿತಿಯ ಜಿಲ್ಲಾ ಜನರಲ್ ಕನ್ವೀನರ್ ಹಾಗೂ ಸಮಸ್ತ ಮುಶಾವರ ಸದಸ್ಯ ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಎಸ್‌ವೈಎಸ್ ದ.ಕ. ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಎಸ್ಕೆಎಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ, ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ಹಲವರು ಮಾತನಾಡಿದರು.

ವೇದಿಕೆಯಲ್ಲಿ ವಿವಿಧ ಉಲೇಮಾ, ಸಾದಾತುಗಳು, ಸಾಮಾಜಿಕ ಹಾಗೂ ರಾಜಕೀಯ ನಾಯಕರು ಉಪಸ್ಥಿತರಿದ್ದರು.

ಶತಾಬ್ದಿ ಸಂದೇಶ ಯಾತ್ರೆ
ಸಮಸ್ತ ಅಧ್ಯಕ್ಷ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಅವರ ನೇತೃತ್ವದಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡ ಶತಾಬ್ದಿ ಸಂದೇಶ ಯಾತ್ರೆ, ಕೇರಳದ ಪ್ರಮುಖ ಜಿಲ್ಲೆಗಳ ಮೂಲಕ ಸಾಗುತ್ತಾ ಮಂಗಳೂರು ಅಡ್ಯಾರ್ ಕಣ್ಣೂರಿನಲ್ಲಿ ಸಮಾರೋಪಗೊಂಡಿತು. ಯಾತ್ರೆಗೆ ಸಾವಿರಾರು ಕಾರ್ಯಕರ್ತರು, ಸ್ವಯಂಸೇವಕರು ಹಾಗೂ ಉಲೇಮಾಗಳ ಬೆಂಬಲ ದೊರಕಿತು. ಸಭೆಗೆ ಮುನ್ನ ಮದ್ರಸ ಅಧ್ಯಾಪಕರ ಸಂಗಮ ಹಾಗೂ ಸಮಸ್ತದ ಸೇವೆ–ಸಾಧನೆಗಳನ್ನು ಬಿಂಬಿಸುವ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ವಿಶೇಷ ತರಬೇತಿ ಪಡೆದ ಸ್ವಯಂಸೇವಕರ ಶಿಸ್ತುಬದ್ಧ ಸೇವೆ ಎಲ್ಲರ ಗಮನ ಸೆಳೆಯಿತು.

ಶಾಂತಿ, ಸೌಹಾರ್ದ ಮತ್ತು ಧಾರ್ಮಿಕ ಏಕತೆಯ ಸಂದೇಶವನ್ನು ಸಾರಿದ ಈ ಸಮಾರಂಭವು ಸಮಸ್ತ ಶತಮಾನೋತ್ಸವದ ಪ್ರಮುಖ ಘಟ್ಟವಾಗಿ ಮೂಡಿಬಂದಿತು.

error: Content is protected !!