ಬೆಂಗಳೂರು: ಕರ್ನಾಟಕದಲ್ಲಿಯೂ ಉತ್ತರಪ್ರದೇಶದ ಸರ್ಲಾರದಂತೆ ಬುಲ್ಡೋಜರ್ ಬಳಸಿ ಮುಸ್ಲಿಮರ ಮನೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನ ಯಲಹಂಕ ಕೋಗಿಲು ಲೇಔಟ್ ಸಮೀಪ ಸರ್ಕಾರದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನೆಲಸ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಪಿಣರಾಯಿ ವಿಜಯನ್, ಫಕೀರ್ ಕಾಲೋನಿ ಹಾಗೂ ವಸೀಮ್ ಲೇಔಟ್‌ನಲ್ಲಿ ವರ್ಷಗಳಿಂದ ವಾಸಿಸುತ್ತಿದ್ದ ಮುಸ್ಲಿಂ ಕುಟುಂಬಗಳ ಮನೆಗಳನ್ನು ಧ್ವಂಸ ಮಾಡಿರುವುದು ಅತ್ಯಂತ ಆಘಾತಕಾರಿ ಮತ್ತು ನೋವಿನ ಸಂಗತಿ ಎಂದು ಹೇಳಿದ್ದಾರೆ. ಉತ್ತರ ಭಾರತದಲ್ಲಿ ಸಂಘಪರಿವಾರ ಅನುಸರಿಸುತ್ತಿರುವ ಅಲ್ಪಸಂಖ್ಯಾತ ವಿರೋಧಿ, ಆಕ್ರಮಣಕಾರಿ ರಾಜಕೀಯದ ಮತ್ತೊಂದು ಆವೃತ್ತಿಯನ್ನೇ ಈಗ ಕರ್ನಾಟಕದಲ್ಲಿಯೂ ಕಾಣಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕೊರೆಯುವ ಚಳಿಯಲ್ಲಿ ಕುಟುಂಬಗಳನ್ನು ಮನೆಗಳಿಂದ ಹೊರದಬ್ಬಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಉತ್ತರ ಭಾರತದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ರಾಜಕೀಯ ದಾಳಿ ಇದೀಗ ದಕ್ಷಿಣ ಭಾರತಕ್ಕೂ ವಿಸ್ತರಿಸಿದೆ. ಇಂತಹ ಕ್ರಮವನ್ನು ಕಾಂಗ್ರೆಸ್ ಸರ್ಕಾರ ಯಾವ ರೀತಿ ಸಮರ್ಥಿಸಿಕೊಳ್ಳಲಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಈ ಕಪಟ ಹಾಗೂ ಅಲ್ಪಸಂಖ್ಯಾತ ವಿರೋಧಿ ಪ್ರವೃತ್ತಿಯನ್ನು ವಿರೋಧಿಸಿ ಸೋಲಿಸಲು, ಎಲ್ಲಾ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಶಕ್ತಿಗಳು ಒಟ್ಟಾಗಿ ಒಂದಾಗಬೇಕು ಎಂದು ಪಿಣರಾಯಿ ವಿಜಯನ್ ಕರೆ ನೀಡಿದ್ದಾರೆ.