ಮಂಗಳೂರು: “ಮಾನವನು ಹುಟ್ಟುವಾಗ ಹೆಸರು ಇರುವುದಿಲ್ಲ, ಉಸಿರು ಮಾತ್ರ ಇರುತ್ತದೆ. ಆದರೆ ಉಸಿರು ನಿಂತಾಗ ಹೆಸರು ಮಾತ್ರ ಉಳಿಯಬೇಕು” ಎಂಬ ಚಿಂತನೆಯೊಂದಿಗೆ ಸಮಾಜ ಸೇವೆಯನ್ನು ಜೀವನದ ಧ್ಯೇಯವಾಗಿಸಿಕೊಂಡಿರುವ ಎಂ.ಆರ್.ಜಿ. ಗ್ರೂಪ್‌ನ ಪ್ರವರ್ತಕ ಪ್ರಕಾಶ್ ಶೆಟ್ಟಿ ಅವರು ʻನೆರವುʼ ಸಹಾಯ ಹಸ್ತ ಯೋಜನೆ ಅನೇಕ ಬಡವರ ಕಣ್ಣೀರನ್ನು ಒರೆಸಿದೆ. ಈ ಮೂಲಕ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.

ನಗರದ ಕೂಳೂರು ಗೋಲ್ಡ್ ಫಿಂಚ್ ಮೈದಾನದಲ್ಲಿ ಎಂ.ಆರ್.ಜಿ. ಗ್ರೂಪ್ ವತಿಯಿಂದ ಆಯೋಜಿಸಿದ್ದ ‘ಆಶಾ ಪ್ರಕಾಶ್ ಶೆಟ್ಟಿ ನೆರವು–2025’ ಸಹಾಯ ಹಸ್ತ ಪ್ರದಾನ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಮಾತು ಮುಂದುವರಿಸಿದ ಅವರು, ತಂದೆ ಮಾಧವ್, ತಾಯಿ ರೇಖಾ ಮತ್ತು ಪುತ್ರ ಗೌರವ್ ಅವರ ಹೆಸರಿನಲ್ಲಿ ಸ್ಥಾಪಿತವಾದ ಎಂ.ಆರ್.ಜಿ. ಸಂಸ್ಥೆಯನ್ನು ಸ್ಫಾಪಿಸಿ ಯಾವುದೇ ಜಾತಿ–ಮತ–ಧರ್ಮ ಭೇದವಿಲ್ಲದೆ ವೈದ್ಯಕೀಯ, ಶಿಕ್ಷಣ ಹಾಗೂ ಆರ್ಥಿಕ ನೆರವು ನೀಡುವ ಮೂಲಕ ಪ್ರಕಾಶ್ ಶೆಟ್ಟಿ ಅವರು ಸಮಾಜ ಹಾಗೂ ರಾಜ್ಯಕ್ಕೆ ಮಾದರಿಯಾದ ಕಾರ್ಯ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು. ತಾಳ್ಮೆ, ಪ್ರೀತಿ, ವಿಶ್ವಾಸ, ಪರೋಪಕಾರ, ಸಹಬಾಳ್ವೆ ಮತ್ತು ಕರುಣೆ ಎಂಬ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನ ಸುಂದರವಾಗುತ್ತದೆ ಎಂಬುದನ್ನು ಅವರು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ ಮಾತನಾಡಿ, ಪ್ರಕಾಶ್ ಶೆಟ್ಟಿ ಅವರು ಅರವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತಮ್ಮ ಹುಟ್ಟುಹಬ್ಬವನ್ನು ವೈಭವದಿಂದ ಆಚರಿಸಬಹುದಾಗಿದ್ದರೂ, ಅದನ್ನು ಸಮಾಜಕ್ಕೆ ಸಂದೇಶವಾಗುವಂತೆ ಆಚರಿಸಬೇಕೆಂದು ನಿರ್ಧರಿಸಿದರು. “ನನ್ನ ಹುಟ್ಟುಹಬ್ಬ ಅರ್ಥಪೂರ್ಣವಾಗಬೇಕಾದರೆ ಸಮಾಜಕ್ಕೆ ನೂರು ಸಂದೇಶ ಹೋಗಬೇಕು” ಎಂಬ ಅವರ ಚಿಂತನೆಯಂತೆ, ಅರುವತ್ತು ವರ್ಷ ಮೇಲ್ಪಟ್ಟ ಅರುವತ್ತು ಸಾಧಕರಿಗೆ ಧನಸಹಾಯ ನೀಡುವ ಮೂಲಕ ಈ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು. ಕಳೆದ ಏಳು ವರ್ಷಗಳಿಂದ ನಿರಂತರವಾಗಿ ನಡೆದ ಈ ದಾನಧರ್ಮದಿಂದ 15,000ಕ್ಕೂ ಹೆಚ್ಚು ಮಂದಿ ಫಲಾನುಭವಿಗಳಾಗಿದ್ದಾರೆ. ಇದು ಏಳನೇ ವರ್ಷದ ಕಾರ್ಯಕ್ರಮವಾಗಿದ್ದು, ಈ ಬಾರಿ 4,000 ಬಡ ಕುಟುಂಬಗಳು ಮತ್ತು 100ಕ್ಕೂ ಅಧಿಕ ಸಂಘ–ಸಂಸ್ಥೆಗಳು ನೆರವಿನ ಪ್ರಯೋಜನ ಪಡೆದಿವೆ. ಆರಂಭದಲ್ಲಿ ರೂ.1.25 ಕೋಟಿ ಮೊತ್ತದಿಂದ ಆರಂಭಗೊಂಡ ನೆರವು ಯೋಜನೆ ಈ ಬಾರಿ ರೂ.9.5 ಕೋಟಿಗೆ ತಲುಪಿರುವುದು ಅಪೂರ್ವ ಸಾಧನೆ ಎಂದರು.

ಕಾರ್ಯಕ್ರಮದ ರೂವಾರಿ ಪ್ರಕಾಶ್ ಶೆಟ್ಟಿ ಮಾತನಾಡಿ, ತಾನು ಸಾಮಾನ್ಯ ಕುಟುಂಬದಲ್ಲಿ, ಸಣ್ಣ ಹಳ್ಳಿಯಲ್ಲಿ ಜನಿಸಿ ತುಳುನಾಡಿನ ಮಣ್ಣಿನ ಸಂಸ್ಕೃತಿಯಲ್ಲೇ ಬೆಳೆದವನು ಎಂದು ಸ್ಮರಿಸಿದರು. ತಂದೆ ಮಾಧವ ಶೆಟ್ಟಿ ಮತ್ತು ತಾಯಿ ರತ್ನಾ ಶೆಟ್ಟಿ ಅವರೊಂದಿಗೆ ಕಷ್ಟದ ಬದುಕು ಕಂಡರೂ, ಹಳ್ಳಿಯಲ್ಲಿ ಜಾತಿ–ಧರ್ಮ ಭೇದವಿಲ್ಲದೆ ಎಲ್ಲರ ಮನೆಯಲ್ಲಿ ಊಟ ಮಾಡಿ, ಸ್ನೇಹಿತರಂತೆ ಬೆಳೆದ ಜೀವನವೇ ಇಂದಿನ ಸೇವಾ ಮನೋಭಾವಕ್ಕೆ ಕಾರಣವಾಯಿತು ಎಂದರು. “ಜಗತ್ತಿನಲ್ಲಿ ತಾಯಿಗಿಂತ ಶ್ರೇಷ್ಠವಾದುದು ಯಾವುದೂ ಇಲ್ಲ. ತಾಯಿ ತನ್ನ ಮಗ ಹೇಗಿರಬೇಕು ಎಂದು ಕನಸು ಕಂಡು ಸಾಕುತ್ತಾಳೆ. ಆ ಕನಸನ್ನು ಈಡೇರಿಸಿದ್ದೇನೆ ಎಂಬ ತೃಪ್ತಿ ಇದೆ” ಎಂದು ಅವರು ಭಾವುಕರಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಕಾಪು ಶಾಸಕರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ‘ನೆರವು’ ಕಾರ್ಯಕ್ರಮದ ಹಿನ್ನೆಲೆಯನ್ನು ವಿವರಿಸಿದರು. ಅಲ್ಲದೆ ಪುನೀತ್ ರಾಜ್‌ಕುಮಾರ್ ಅವರ ಸೇವೆಯ ಮಾರ್ಗಗಳನ್ನು ವಿವರಿಸಿದಾಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭಾವುಕರಾದರು. ವೇದಿಕೆಯಲ್ಲಿ ಚಿತ್ರ ನಿರ್ಮಾಪಕಿ ಪುನೀತ್ ರಾಜ್‌ಕುಮಾರ್ ಅವರು ಫಲಾನುಭವಿಗಳು, ಸಂಘ–ಸಂಸ್ಥೆಗಳು ಹಾಗೂ ಸಾಧಕರಿಗೆ ಸಾಂಕೇತಿಕವಾಗಿ ಸಹಾಯಧನ ಹಸ್ತಾಂತರಿಸಿದರು.
ದಾಮೋದರ ಶರ್ಮಾ, ನಿತೇಶ್ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಸಮೀಕ್ಷಾ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಕೊಪ್ಪ, ಸಕಲೇಶಪುರ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಅವಶ್ಯಕತೆಯುಳ್ಳವರಿಗೆ ನೆರವು ವಿತರಿಸಲಾಯಿತು. ಸುಮಾರು 4,000 ಕುಟುಂಬಗಳು ಮತ್ತು 100ಕ್ಕೂ ಹೆಚ್ಚು ಸಂಘ–ಸಂಸ್ಥೆಗಳಿಗೆ ಒಟ್ಟು ರೂ.9.5 ಕೋಟಿಗೂ ಅಧಿಕ ಮೊತ್ತದ ಸಹಾಯಧನವನ್ನು ಶಿಸ್ತಿನಿಂದ ವಿತರಿಸುವ ಮೂಲಕ ‘ನೆರವು–2025’ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.