ಪತ್ತನಂತಿಟ್ಟ: ಮಂಗಳೂರು ಸೇರಿದಂತೆ ಕರಾವಳಿ ಭಾಗಗಳಿಂದ ಅನೇಕ ಭಕ್ತರು ಎರಿಮಲೆ(Erumeli) ಮಾರ್ಗದ ಮೂಲಕ ಪಾದಯಾತ್ರೆ ಮಾಡಿ, ಪರ್ವತಾರೋಹಣ ಮಾಡಿ ಶಬರಿಮಲೆ ಸನ್ನಿಧಾನ ತಲುಪುತ್ತಾರೆ. ಇದರ ಮುಖಾಂತರ ಸಾಗಿ ಅಯ್ಯಪ್ಪನ ದರ್ಶನ ಪಡೆದರೆ ಪಾಪವೆಲ್ಲಾ ಕಳೆಯುತ್ತದೆ ಎನ್ನುವುದು ನಂಬಿಕೆ. ಹಾಗಾಗಿ ಈ ಮಾರ್ಗದಲ್ಲಿ ಇರುವ ಗೇಟ್ ತೆರೆಯುವ ಮತ್ತು ಮುಚ್ಚುವ ಸಮಯಗಳ ಬಗ್ಗೆ ಪೂರ್ಣ ಮಾಹಿತಿ ಇಲ್ಲದಿದ್ದರೆ ಭಕ್ತರು ಅಪ್ರಯತ್ನವಾಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

ಎರಿಮಲೆ ಪಾದಯಾತ್ರೆಗೆ ಬೆಳಿಗ್ಗೆ 7 ಗಂಟೆಗೆ ಮಾತ್ರ ಗೇಟ್ ತೆರೆಯಲಾಗುತ್ತದೆ. ಬೆಳಗಿನ ಜಾವ ಪಾದಯಾತ್ರೆ ಆರಂಭಿಸಲು ಅವಕಾಶ ಇರುವುದಿಲ್ಲ. ಗೇಟ್ ತೆರೆಯುತ್ತಿದ್ದಂತೆ ಭಕ್ತರು ಕ್ರಮಬದ್ಧವಾಗಿ ಪಾದಯಾತ್ರೆ ಮುಂದುವರಿಸಬಹುದು.
ಪಾದಯಾತ್ರೆಯ ಮಧ್ಯಭಾಗದಲ್ಲಿರುವ ಅಳೂಧಾ ಬಳಿ ಮಧ್ಯಾಹ್ನ 2.30ಕ್ಕೆ ಗೇಟ್ ಮುಚ್ಚಲಾಗುತ್ತದೆ. ಈ ಸಮಯದೊಳಗೆ ಅಲ್ಲಿಗೆ ತಲುಪದ ಭಕ್ತರಿಗೆ ಮುಂದಕ್ಕೆ ಸಾಗಲು ಅವಕಾಶ ನೀಡಲಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಭಕ್ತರು ಅದೇ ಪ್ರದೇಶದಲ್ಲೇ ತಂಗಿ, ಮರುದಿನ ಬೆಳಿಗ್ಗೆಯೇ ಪಾದಯಾತ್ರೆ ಪುನರಾರಂಭಿಸಬೇಕಾಗುತ್ತದೆ.
ಅದೇ ರೀತಿ, ಅಳೂಧಾ (Azhutha ) ಬೆಟ್ಟ ಹತ್ತಿ ಇಳಿದ ಆನಂತರ ಇರುವ ಮತ್ತೊಂದು ಗೇಟ್ ಮಧ್ಯಾಹ್ನ 3 ಗಂಟೆಗೆ ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಈ ಸಮಯದ ನಂತರ ಯಾರಿಗೂ ಪಾದಯಾತ್ರೆ ಮುಂದುವರಿಸಲು ಅವಕಾಶ ಇರುವುದಿಲ್ಲ.
ಈ ಗೇಟ್ ಸಮಯಗಳ ಕುರಿತು ಮಾಹಿತಿ ಇಲ್ಲದೆ ಪಾದಯಾತ್ರೆ ಕೈಗೊಳ್ಳುವ ಕೆಲ ಭಕ್ತರು, ಮಧ್ಯದಲ್ಲೇ ಬೆಟ್ಟ ಪ್ರದೇಶದಲ್ಲಿ ಉಳಿಯಬೇಕಾದ ಪರಿಸ್ಥಿತಿಗೆ ತಲುಪುತ್ತಿದ್ದಾರೆ. ಇದರಿಂದ ಆಹಾರ, ವಿಶ್ರಾಂತಿ ಹಾಗೂ ಭದ್ರತೆ ಸಂಬಂಧಿತ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.
ವಿಶೇಷವಾಗಿ ಮಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಿಂದ ರೈಲಿನಲ್ಲಿ ಆಗಮಿಸಿ ಪಾದಯಾತ್ರೆ ಕೈಗೊಳ್ಳುವ ಭಕ್ತರು, ರೈಲ್ವೆ ಟಿಕೆಟ್‌ಗಳನ್ನು ಮುಂಚಿತವಾಗಿ ಬುಕ್ ಮಾಡುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕಾಗಿದೆ. ಪಾದಯಾತ್ರೆಗೆ ಬೇಕಾದ ಸಮಯವನ್ನು ಸರಿಯಾಗಿ ಅಂದಾಜಿಸದೆ ಟಿಕೆಟ್ ಬುಕ್ ಮಾಡಿದರೆ ದರ್ಶನ ಹಾಗೂ ಮರಳುವ ಪ್ರಯಾಣದಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದೆ.
ಆದ್ದರಿಂದ, ಎರಿಮಲೆ ಮಾರ್ಗದ ಮೂಲಕ ಶಬರಿಮಲೆ ಸನ್ನಿಧಾನ ತಲುಪುವ ಭಕ್ತರು ಗೇಟ್ ಸಮಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣ ಯೋಜನೆ ರೂಪಿಸಬೇಕೆಂದು ಅನುಭವೀ ಯಾತ್ರಿಕರು ಸಲಹೆ ನೀಡಿದ್ದಾರೆ.
ಶಬರಿಮಲೆ ಪಾದಯಾತ್ರೆ: ಎರುಮೆಲಿ ಮಾರ್ಗ (ಸಂಕ್ಷಿಪ್ತ ಗೈಡ್)
🔰 ಆರಂಭ: ಎರುಮೆಲಿ
ಧರ್ಮಶಾಸ್ತಾ ದೇವಾಲಯ ಮತ್ತು ವಾವರ್ ಸ್ವಾಮಿ ದರ್ಗಾದಲ್ಲಿ ಪೂಜೆ.
ಮೊದಲ ಬಾರಿಗೆ ಯಾತ್ರೆ ಮಾಡುವ ಕನ್ನಿಸ್ವಾಮಿಗಳು ಪೆಟ್ಟತೂಳಲ್ ಆಚರಣೆ ನಡೆಸುತ್ತಾರೆ.
ದೇವಾಲಯದ ಅನುಮತಿ ಪಡೆದು ಗುರುಗಳ ನೇತೃತ್ವದಲ್ಲಿ ಪಾದಯಾತ್ರೆ ಆರಂಭ.
➡️ ಪೆರುರ್ ತೋಡು (4 ಕಿ.ಮೀ):
ಅಯ್ಯಪ್ಪ ಸ್ವಾಮಿ ವಿಶ್ರಾಂತಿ ಪಡೆದ ಸ್ಥಳ.
ದಾನ ನೀಡುವುದು ಪುಣ್ಯಕರ. ಇಲ್ಲಿಂದ ಏರಿಕೆ ಆರಂಭ.
➡️ ಕಾಲಕೇಟಿ (10 ಕಿ.ಮೀ):
ಶಿವನು ನಂದಿಯೊಂದಿಗೆ ಬಂದೆಂದು ನಂಬಿಕೆ.
ಕರ್ಪೂರ ಹಚ್ಚಿ, ತೆಂಗಿನಕಾಯಿ ಒಡೆದು ಪ್ರಾರ್ಥನೆ.
➡️ ಅಳೂಧೆ ನದಿ & ಅಳೂಧೆ ಬೆಟ್ಟ:
ಪಂಪಾ ನದಿಯ ಉಪನದಿ.
ಅತ್ಯಂತ ಕಠಿಣ ಏರಿಕೆ – ಭಕ್ತಿ ಮತ್ತು ಸಹನಶೀಲತೆಯ ಪರೀಕ್ಷೆ.
➡️ ಕಲ್ಲಿಡುಂಕುನ್ನು:
ಅಳೂಧೆ ನದಿಯಿಂದ ತಂದ ಕಲ್ಲನ್ನು ಇಲ್ಲಿ ಬಿಡುವ ಪದ್ಧತಿ.
➡️ ಇಂಚಿಪ್ಪಾರಕೋಟ:
ಕೋಟಾಯಿಲ್ ಶಾಸ್ತಾ ದೇವಾಲಯ.
ಜಾರಿ ಇಳಿಜಾರಿನ ದಾರಿ ಆರಂಭ.
➡️ ಮುಖ್ಕುಳಿ – ಕರಿಯಿಲಂ ತೋಡು:
ಸ್ವಲ್ಪ ವಿಶ್ರಾಂತಿ ಮತ್ತು ಶಕ್ತಿ ಸಂಗ್ರಹ.
➡️ ಕರಿಮಲ (5 ಕಿ.ಮೀ):
ಏಳು ಹಂತಗಳ ಕಠಿಣ ಏರಿಕೆ.
ಆನೆಗಳ ವಾಸಸ್ಥಳ; ‘ಆಳಿ’ ಹಚ್ಚುವ ಪದ್ಧತಿ.
ನಝಿಕ್ಕಿನರ್ ಬಾವಿ, ಕರಿಮಲನ್ತನ್–ಕೊಚ್ಚುಕಡುತಸ್ವಾಮಿ–ಭಗವತಿ ಪೂಜೆ.
➡️ ಪೆರಿಯ ಅಣ್ಣೈ ವಟ್ಟಂ – ಸಿರಿಯ ಅಣ್ಣೈ ವಟ್ಟಂ:
ವಿಶ್ರಾಂತಿ ಹಂತಗಳು.
➡️ ಪಂಪಾ ನದಿ:
ಅತ್ಯಂತ ಪವಿತ್ರ ಸ್ಥಳ.
ಸ್ನಾನ ಮಾಡಿ ಸನ್ನಿಧಾನ ಪಾದಯಾತ್ರೆಗೆ ಸಿದ್ಧತೆ.
🔚 ಮುಂದಿನ ದಾರಿ: ಪಂಪಾ → ಸನ್ನಿಧಾನಂ (ಅಯ್ಯಪ್ಪ ದರ್ಶನ)