ಮನ್‌ರೇಗಾದಿಂದ ʻಗಾಂಧಿʼ ಕೈ ಬಿಟ್ಟಿದ್ದಕ್ಕೆ ಕಾಂಗ್ರೆಸ್‌ ಕಿಡಿಕಿಡಿ: ʻಕೈʼ ಕಾರ್ಯಕರ್ತರಿಂದ ಬಿಜೆಪಿ ಕಚೇರಿ ಮುತ್ತಿಗೆ ಯತ್ನ- ಪೊಲೀಸರಿಂದ ಅಡ್ಡಿ!

ಮಂಗಳೂರು: ʻಮನ್‌ರೇಗಾʼ(ಮಹತ್ಮಾ ಗಾಂಧಿ ಉದ್ಯೋಗ ಖಾತರಿ) ಯೋಜನೆಯಿಂದ ಮಹಾತ್ಮಾ ಗಾಂಧಿ ಅವರ ಹೆಸರನ್ನು ಕೈಬಿಟ್ಟು, ಯೋಜನೆಯ ಸ್ವರೂಪಗಳನ್ನು ಬದಲಿಸಿರುವುದು ಹಾಗೂ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಸೋನಿಯಾಗಾಂಧಿ, ರಾಹುಲ್‌ ಗಾಂಧಿಯರನ್ನು ಸಿಲುಕಿಸಿ, ಇ.ಡಿ.ಯನ್ನು ದುರುಪಯೋಗಪಡಿಸಲಾಗುತ್ತದೆ ಎಂದು ಆರೋಪಿಸಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಇಂದು ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್‌ ಕಚೇರಿಯ ಮುಂದೆ ಬೃಹತ್‌ ಪ್ರತಿಭಟನೆ ನಡೆಸಿ, ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

 

ಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ , ಮಾಜಿ ಸಂಸದ ವಿಜಯ್ ಇಂದರ್ ಸಿಂಗ್ಲಾ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಪಿವಿಎಸ್‌ ಸರ್ಕಲ್‌ ಬಳಿ ಇರು ಬಿಜೆಪಿ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕುವ ಘೋಷಣೆಯೊಂದಿಗೆ ಹೊರಟ ಕಾಂಗ್ರೆಸ್‌ ಕಾರ್ಯಕರ್ತರನ್ನು ಮಲ್ಲಿಕಟ್ಟೆಯಿಂದ ಪರ್ಲಾಂಗು ದೂರದಲ್ಲಿರುವ ಕದ್ರಿ ದ್ವಾರದ ಬಳಿಯೇ ತಡೆದ ಪೊಲೀಸರು ಒಬ್ಬೊಬ್ಬರನ್ನೇ ವಶಕ್ಕೆ ಪಡೆದಿದ್ದು ಈ ವೇಳೆ ಹೈಡ್ರಾಮವೇ ನಡೆದಿದೆ. ಇದರಿಂದ ಕಾಂಗ್ರೆಸ್‌ ಕಾರ್ಯಕರ್ತರ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವ ಕನಸು ಭಗ್ನಗೊಂಡಿತು.

ಮಲ್ಲಿಕಟ್ಟೆಯಿಂದ ಕಾಲ್ನಡಿಗೆಯಲ್ಲಿ ಹೊರಟ ಕಾಂಗ್ರೆಸ್‌ ಕಾರ್ಯಕರ್ತರು ಪಿವಿಎಸ್‌ನಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿವರೆಗೂ ಘೋಷಣೆಗಳನ್ನೂ ಕೂಗುತ್ತಾ ಮುತ್ತಿಗೆ ಹಾಕಲು ಜಬರ್ದಸ್ತಿನಿಂದಲೇ ಹೊರಟಿದ್ದರು. ಆದರೆ ಕೊಂಚ ದೂರದಲ್ಲಿಯೇ ಪೊಲೀಸರು ಸರ್ಪಗಾವಲು ಹಾಕಿ ಕೂತಿದ್ದ ಪೊಲೀಸರು ತನ್ನ ಪೊಲೀಸ್‌ ಬಸ್ಸನ್ನು ಅಡ್ಡ ಇಟ್ಟು ಪ್ರತಿಭಟನಾಕಾರರು ಮುಂದಕ್ಕೆ ಚಲಿಸದಂತೆ ಅಲ್ಲಿಯೇ ತಡೆದರು. ಇದರಿಂದ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ನೂಕಾಟ- ತಳ್ಳಾಟ ನಡೆಯಿತು. ಕೊನೆಗೆ ಪೊಲೀಸರು ಪ್ರತಿಭಟನಾ ನಿರತರ ಒಬ್ಬೊಬ್ಬರನ್ನೇ ವಶಕ್ಕೆ ಪಡೆದ್ದಾರೆ.

ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಸಚಿವ ರಮಾನಾಥ ರೈ ಮಾತನಾಡಿ, “ಮಹಾತ್ಮಾ ಗಾಂಧಿ ಈ ದೇಶದ ಅಸ್ಮಿತೆ. ಇಡೀ ವಿಶ್ವವೇ ಗೌರವಿಸುವ ನಾಯಕನ ಹೆಸರನ್ನು ಮನ್‌ರೇಗಾ ಯೋಜನೆಯಿಂದ ಕೈಬಿಡುವ ಮೂಲಕ ಕೇಂದ್ರ ಸರ್ಕಾರ ಗಾಂಧಿಗೆ ಅವಮಾನ ಮಾಡಿದೆ” ಎಂದು ಕಿಡಿಕಾರಿದರು.

ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಧಿಕ್ಕಾರಗಳು ಮೊಳಗಿದವು. ಇದೇ ವೇಳೆ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ನೆಪದಲ್ಲಿ ರಾಹುಲ್‌ ಗಾಂಧಿ ಹಾಗೂ ಗಾಂಧಿ ಪರಿವಾರವನ್ನು ಗುರಿಯಾಗಿಸಿ ಬಂಧಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. “ಬೃಹತ್‌ ಪ್ರತಿಭಟನೆ” ಸ್ವರೂಪದಲ್ಲಿ ಆರಂಭಗೊಂಡಿದ್ದ ಪ್ರತಿಭಟನೆ ಪೊಲೀಸ್‌ ಬಂದೋಬಸ್ತಿನ ಮುಂದೆ ಕ್ಷಣಾರ್ಧದಲ್ಲಿ ಮುಕ್ತಾಯಗೊಂಡಿತು.

ವಿಧಾನ ಪರಿಷತ್ ಸದಸ್ಯರಾದ ಡಾ.ಮಂಜುನಾಥ ಭಂಡಾರಿ ಮತ್ತು ಐವನ್ ಡಿ ಸೋಜ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್.ಲೋಬೊ, ಪಕ್ಷದ ಪ್ರಮುಖರಾದ ಎಂ.ಎ.ಗಪೂರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಸದಾಶಿವ ಉಳ್ಳಾಲ, ಕೆ.ಅಶ್ರಫ್, ಶಾಲೆಟ್ ಪಿಂಟೊ, ಅಪ್ಪಿ, ಅಬ್ದುಲ್ ರವೂಫ್, ಸುರೇಶ್ ಬಳ್ಳಾಲ್, ಎಂ.ಎಸ್ ಮುಹಮ್ಮದ್ , ಶಶೀಧರ ಹೆಗ್ಡೆ, ಎಸ್ ಅಪ್ಪಿ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!