ಸುರತ್ಕಲ್: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾರ್ಥಮಿಕ ಶಾಲೆ ಮಧ್ಯ ಇಲ್ಲಿಗೆ ಸರಕಾರದ ವತಿಯಿಂದ 6 ಎಕರೆ ಜಾಗ ಮಂಜೂರಾತಿಗೊಂಡಿದೆ. ಆ ಜಾಗದಲ್ಲಿ ಮಧ್ಯ ಶಾಲೆಯ ವಿಧ್ಯಾನಿಧಿ ಎಜುಕೇಷನ್ ಟ್ರಸ್ಟ್ ನ ಗೌರವಾಧ್ಯಕ್ಷ ಹಾಗೂ ಮುಂಬೈ ಉದ್ಯಮಿ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು ಅವರ ಮುಖಾಂತರ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನೂತನ ಪ್ರೌಢಶಾಲೆಯ 5 ಕೊಠಡಿಗಳು ನಿರ್ಮಾಣಗೊಂಡಿದ್ದು ಸರಕಾರವು ಪ್ರಸಕ್ತ ವರ್ಷದಲ್ಲಿ ಶಾಲೆಯಲ್ಲಿ ಹೈಸ್ಕೂಲ್ ಪ್ರಾರಂಭಿಸಲು ಅನುಮತಿ ದೊರಕಿದ್ದು ಡಿ.20ರಂದು ಬೆಳಗ್ಗೆ 10 ಗಂಟೆಗೆ ಪ್ರೌಢಶಾಲೆಯ ನೂತನ ಕೊಠಡಿ ಉದ್ಘಾಟನೆಗೊಳ್ಳಲಿದೆ ಎಂದು ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಡಿ.21ರಂದು ಶಾಲಾ ವಾರ್ಷಿಕೋತ್ಸವ ನಡೆಯಲಿದೆ. 2015-16ರ ಸಾಲಿನಲ್ಲಿ 75 ಮಕ್ಕಳನ್ನು ಹೊಂದಿದ್ದ ಶಾಲೆಯನ್ನು ಕರುಣಾಕರ ಎಂ. ಶೆಟ್ಟಿಯವರ ಗೌರವಾಧ್ಯಕ್ಷತೆಯಲ್ಲಿ ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ನ್ನು ಸ್ಥಾಪಿಸಿ ವಿವಿಧ ದಾನಿಗಳಿಂದ ಎಂಆರ್.ಪಿ.ಎಲ್, ಎಚ್ ಪಿಸಿಎಲ್, ಬಿಎಎಸ್ಎಫ್, ಎಂಸಿಎಫ್ ಗಳಂತಹ ಸಂಸ್ಥೆಯಿಂದ, ವಿವಿಧ ಸಂಘಗಳಿಂದ, ಊರವರಿಂದ, ಹಳೆ ವಿದ್ಯಾರ್ಥಿಗಳಿಂದ, ಜನಪ್ರತಿನಿಧಿಗಳ ಸಹಕಾರ, ಸರಕಾರ ಮತ್ತು ಇಲಾಖೆಗಳ ಸಹಕಾರದಿಂದ ಪ್ರಸ್ತುತ ಶಾಲೆಯು 600 ವಿದ್ಯಾರ್ಥಿಗಳನ್ನು ಹೊಂದಿದ್ದು ಸುಮಾರು ಅಂದಾಜು 7 ಕೋಟಿಯಷ್ಟು ವೆಚ್ಚಮಾಡಿ ಶಾಲೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
ಬಳಿಕ ಮಾತಾಡಿದ ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ನ ಗೌರವಾಧ್ಯಕ್ಷರಾದ ಕರುಣಾಕರ ಎಂ. ಶೆಟ್ಟಿ ಅವರು, “ಮಧ್ಯ ಶಾಲೆಯು ಉತ್ತಮ ಶಾಲೆಯೆಂದು ತಾಲೂಕು, ಜಿಲ್ಲೆ, ರಾಜ್ಯಮಟ್ಟದ ಪ್ರಶಸ್ತಿ ಬಂದಿರುತ್ತದೆ. ಇಡೀ ರಾಜ್ಯಕ್ಕೆ ಮಾದರಿ ಶಾಲೆಯಾಗಿದೆ. ಮಕ್ಕಳ ಕಲಿಕೆಗೆ ಪೂರಕವಾದ ತರಗತಿಗಳ ವಿನ್ಯಾಸ, ಕೊಠಡಿಗಳಿಗೆ ಟೈಲ್ಸ್ ಅಳವಡಿಕೆ, ಎಲ್ಲಾ ತರಗತಿಗಳಿಗೆ ಸ್ಮಾರ್ಟ್ ಟಿ.ವಿ, ಸ್ಮಾರ್ಟ್ ಕ್ಲಾಸ್, ಮಕ್ಕಳಿಗೆ 5 ಬಸ್ಸಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕ, ಹೈಟೆಕ್ ಶೌಚಾಲಯ ವ್ಯವಸ್ಥೆ, ಗ್ರಂಥಾಲಯ ವಿಜ್ಞಾನ ಕೊಠಡಿ, ಬಾಲವನ ವ್ಯವಸ್ಥೆ, ವಿಶಾಲವಾದ ಆಟದ ಮೈದಾನ, ಉಚಿತ ಬರೆಯುವ ಪುಸ್ತಕ, ಭದ್ರತೆಗೆ ಎಲ್ಲಾ ತರಗತಿಗಳಿಗೂ ಸಿಸಿಟಿವಿ, ಕಂಪ್ಯೂಟರ್ ತರಗತಿಗಳು ಹೀಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಶಾಲೆಯಾಗಿರುತ್ತದೆ ಎಂದರು.
ಪ್ರಸ್ತುತ ಯೋಗ, ಕರಾಟೆ, ಭರತನಾಟ್ಯ, ಯಕ್ಷಗಾನ ತರಗತಿಗಳನ್ನು ಪ್ರಾರಂಭಿಸಲಾಗಿದೆ. ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣ ದೊರಕಬೇಕೆಂಬ ಉದ್ದೇಶದಿಂದ ಸುಮಾರು 11 ಶಿಕ್ಷಕರನ್ನು ಮತ್ತು 5 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ತಿಂಗಳಿಗೆ ಸುಮಾರು 4 ಲಕ್ಷ ಇದಕ್ಕೆ ವೆಚ್ಚಮಾಡಲಾಗುತ್ತಿದೆ. ಈಗಾಗಲೇ ವಿಶಾಲವಾದ 6 ಎಕರೆ ಜಾಗದಲ್ಲಿ ಪ್ರೌಢಶಾಲೆಗೆ ಸರಕಾರ ಅನುಮತಿ ನೀಡಿದ್ದು ಮುಂದಿನ ದಿನಗಳಲ್ಲಿ ಇಲ್ಲಿ ಕಾಲೇಜು ಪ್ರಾರಂಭಿಸಿ ಜಿಲ್ಲಾಮಟ್ಟದ ಆಟದ ಮೈದಾನ ರಚಿಸುವ ಉದ್ದೇಶವಿದೆ ಹಾಗೂ ಸುಮಾರು ಒಂದು ಕೋಟಿಯಷ್ಟು ಶಾಶ್ವತ ವಿಧ್ಯಾನಿಧಿ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಇದರ ಬಡ್ಡಿಯಿಂದ ಬರುವ ಹಣದಿಂದ ಬಡ ವಿದ್ಯಾರ್ಥಿಗಳ ಆರೋಗ್ಯ ಸಮಸ್ಯೆ ಹಾಗೂ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಭಟ್, ಕೋಶಾಧಿಕಾರಿ ವಿಠಲ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರಫುಲ್ಲ ಪಂಜ, ಉಪಾಧ್ಯಕ್ಷ ಅನಿಲ್ ಸಾಲಿಯಾನ್ ಸೂರಿಂಜೆ, ಸದಸ್ಯರಾದ ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.