ಬೆಂಗಳೂರು: ಫೋಟೋ ಶೂಟ್‌ಗೆ ಗೆಳೆಯರ ಜತೆ ಹೋಗಿದ್ದ 15 ವರ್ಷದ ಬಾಲಕನೊಬ್ಬ 40 ಅಡಿ ಎತ್ತರ ಹಳೇ ಕಟ್ಟಡದಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ಘಟನೆ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಉಲ್ಲಾಳು ನಿವಾಸಿ ನಿಶಾಂತ್ (15) ಮೃತ ಬಾಲಕ.
ಸ್ನೇಹಿತನೊಬ್ಬ ಅನ್ನಪೂರ್ಣೇಶ್ವರಿ ನಗರದ ವ್ಯಾಪ್ತಿಯಲ್ಲಿ ಹಳೇ ಬಂಗಲೇ ಇದ್ದು, ಅದು ಫೋಟೋ ಶೂಟ್ ಮಾಡಲು ಉತ್ತಮವಾಗಿದೆ ಎಂದು ಈ ಹಿಂದೆ ನಿಶಾಂತ್‌ಗೆ ಹೇಳಿದ್ದ. ಹೀಗಾಗಿ ಖಾಸಗಿ ಶಾಲೆಯಲ್ಲಿ 10ನೇ ತರಗತಿಯ ಸಿಬಿಎಸ್‌ಸಿ ಪರೀಕ್ಷೆ ಮುಗಿಸಿದ್ದ ಮೂವರು ಸ್ನೇಹಿತರು ಫೋಟೋ ಶೂಟ್ ಮಾಡಲು ಆ ಪಾಳು ಬಿದ್ದ ಕಟ್ಟಡಕ್ಕೆ ಶನಿವಾರ ಸಂಜೆ 5.30ರ ಸುಮಾರಿಗೆ ಬಂದಿದ್ದರು. ಆ ಕಟ್ಟಡದಲ್ಲಿ ಫೋಟೋ ಶೂಟ್ ಮಾಡುತ್ತಾ 2ನೇ ಮಹಡಿವರೆಗೂ ಹೋಗಿದ್ದಾರೆ. ಈ ವೇಳೆ ಗೋಪುರ ಮಾದರಿ ಇರುವ 10 ಅಡಿ ಎತ್ತರವಿರುವ ಸ್ಥಳದಲ್ಲಿ ನಿಶಾಂತ್ ಹೋಗಿದ್ದು, ಈ ವೇಳೆ ಗೆಳೆಯರು ಅಪಾಯವಿದೆ. ಅಲ್ಲಿ ಹೋಗಬೇಡ ಎಂದು ಎಷ್ಟೇ ಹೇಳಿದರೂ ಕೇಳದೆ ಅದರ ಮೇಲೆ ನಿಂತುಕೊಂಡು ಫೋಟೋ ಫೋಜ್ ನೀಡಿ ಫೋಟೋ ತೆಗೆಯುವಂತೆ ಹೇಳಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.


ಫೋಟೋ ತೆಗೆಸಿಕೊಂಡ ನಂತರ ಇಳಿಯುವಾಗ, ಬೆಳಕು ಬರಲಿ ಎಂದು ಅಲ್ಲಲ್ಲಿ ಪ್ಲಾಸ್ಟಿಕ್ ಶೀಟ್ ಹಾಕಲಾಗಿತ್ತು. ತಿಳಿಯದೆ ಅದರ ಮೇಲೆ ಕಾಲು ಇಟ್ಟಿದ್ದು, ಆಗ ನಿಯಂತ್ರಣ ತಪ್ಪಿ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಅದರಿಂದ ಗಾಬರಿಗೊಂಡ ಇಬ್ಬರು ಗೆಳೆಯರು ಬೇರೆ ಗೆಳೆಯರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಪರೀಕ್ಷಿಸಿದ ವೈದ್ಯರು ಆತ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ ಎಂದು ದೃಢಪಡಿಸಿದ್ದಾರೆ.
ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಬಾಲಕನ ತಂದೆ ನೀಡಿದ ದೂರಿನನ್ವಯ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.