ಮಂಗಳೂರು: ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಮೂಡಬಿದ್ರೆ ಹಾಗೂ ಸುಳ್ಯ ಹೀಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಡಿಸೆಂಬರ್ 13 ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ, ಸಾರ್ವಜನಿಕರು ದೀರ್ಘಕಾಲದಿಂದ ಬಾಕಿ ಇರುವ ನ್ಯಾಯಾಲಯ ಪ್ರಕರಣಗಳನ್ನು ರಾಜಿ–ಸಂಧಾನದ ಮೂಲಕ ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ದೊರಕಲಿದೆ ಎಂದು ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ ಮಾಹಿತಿ ನೀಡಿದರು.

ಮಂಗಳೂರಿನ ನ್ಯಾಯಾಲಯದ ಸಂಕೀರ್ಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಲೋಕ ಅದಾಲತ್‌ನಲ್ಲಿ ಮೋಟಾರು ವಾಹನ ಅಪಘಾತ ಪ್ರಕರಣಗಳು, ಚೆಕ್ ಬೌನ್ಸ್, ಬ್ಯಾಂಕ್ ಸಾಲ ವಸೂಲಾತಿ, ಅಕ್ರಮ ಮರಳುಗಾರಿಕೆ–ಸಾಗಾಣಿಕೆ, ಕಾರ್ಮಿಕ–ನಷ್ಟ ಪರಿಹಾರ, ವಿಚ್ಛೇದನ ಹೊರತುಪಡಿಸಿದ ವೈವಾಹಿಕ ವಿವಾದಗಳು, ಗ್ರಾಹಕರ ವಿವಾದ, ಭೂಸ್ವಾಧೀನ, ವಿದ್ಯುತ್–ನೀರು ಶುಲ್ಕ, ವೇತನ–ಪಿಂಚಣಿ, ಜನನ–ಮರಣ ಪ್ರಮಾಣ ಪತ್ರ ಸೇರಿ ಕಾನೂನುಬದ್ಧವಾಗಿ ರಾಜಿಯಾಗಬಹುದಾದ ಎಲ್ಲ ಸಿವಿಲ್ ಪ್ರಕರಣಗಳು ಪರಿಗಣನೆಗೆ ಬರುತ್ತವೆ ಎಂದರು.
ಲೋಕ ಅದಾಲತ್‌ನಲ್ಲಿ ಇತ್ಯರ್ಥೊಳ್ಳುವ ಪ್ರಕರಣಗಳಿಗೆ ನ್ಯಾಯಾಲಯ ಶುಲ್ಕವನ್ನು ವಾಪಸ್ ನೀಡಲಾಗುತ್ತದೆ ಎಂದು ಅವರು ತಿಳಿಸಿದರು. ಜೊತೆಗೆ, ಈ ಬಾರಿ ಆರ್‌ಟಿಓ ಪ್ರಕರಣಗಳನ್ನು ಸಹ ವಿಶೇಷವಾಗಿ ಸೇರಿಸಲಾಗಿದೆ ಎಂದರು.
ಡಿಸೆಂಬರ್ 13ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್‌ಗಾಗಿ ಜಿಲ್ಲೆಯಲ್ಲಿ ಪೂರ್ವಸಿದ್ಧತೆಗಳು ನಡೆಯುತ್ತಿದೆ ಎಂದ ಬಸವರಾಜ್ ಅವರು, ಪ್ರಕರಣಗಳ ವಿವರಗಳನ್ನು ಮುಂದಿಟ್ಟರು.
ಅವರು ತಿಳಿಸಿದಂತೆ, 01.12.2025ರಂತೆ ಜಿಲ್ಲೆಯಲ್ಲಿ ಒಟ್ಟು 55,555 ಪ್ರಕರಣಗಳು ಬಾಕಿ ಇವೆ. ಇದರ ಪೈಕಿ 9,051 ಪ್ರಕರಣಗಳು ಲೋಕ ಅದಾಲತ್‌ನಲ್ಲಿ ಇತ್ಯರ್ಥಕ್ಕೆ ಯೋಗ್ಯವೆಂದು ಗುರುತಿಸಲಾಗಿದೆ. ಆಗಳಲ್ಲಿ 3,818 ಪ್ರಕರಣಗಳನ್ನು ಲೋಕ ಅದಾಲತ್ ವಿಷಯಗಳಾಗಿ ಸೂಚಿಸಲಾಗಿದೆ. ಈಗಾಗಲೇ 957 ಪ್ರಕರಣಗಳು ರಾಜಿ ಆಗಿ ವರದಿಗಾಗಿ ಸಿದ್ಧಗೊಂಡಿವೆ, ಮತ್ತು 52 ಪ್ರಕರಣಗಳನ್ನು ನ್ಯಾಯಾಲಯ ಈಗಾಗಲೇ ವಿಲೇವಾರಿ ಮಾಡಿದೆ ಎಂದು ತಿಳಿಸಿದರು.
ಹಿಂದಿನ 13.09.2025ರ ಲೋಕ ಅದಾಲತ್ ಕುರಿತು ವಿವರ ನೀಡಿದ ಅವರು, ಆಗ 55,006 ಬಾಕಿ ಪ್ರಕರಣಗಳ ಪೈಕಿ 6,001 ಪ್ರಕರಣಗಳನ್ನು ಗುರುತಿಸಲಾಗಿತ್ತು. ಜೊತೆಗೆ PLC ವಿಭಾಗದಲ್ಲಿ 2,41,605 ಪ್ರಕರಣಗಳು ದಾಖಲಾಗಿದ್ದು, 3,684 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿತ್ತು, ಮತ್ತು 2,32,662 PLC ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ಈ ಬಾರಿ ಸಾರ್ವಜನಿಕರು ನ್ಯಾಯಾಲಯ ಶುಲ್ಕ ಮನ್ನಾ ಹಾಗೂ ರಾಜಿ–ಸಂಧಾನ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳುವಂತೆ ಬಸವರಾಜ್ ಅವರು ಮನವಿ ಮಾಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸ ಅವರು ಮಾತನಾಡಿ, ಅವರು ಮಾತನಾಡಿ, ಸರ್ಕಾರದ 21.11.2025ರ ಆದೇಶದ ಪ್ರಕಾರ 1991–92ರಿಂದ 2019–20ರವರೆಗೆ ಸಾರಿಗೆ ಇಲಾಖೆಯಲ್ಲಿ ದಾಖಲಾಗಿರುವ ಟ್ರಾಫಿಕ್ ದಂಡ ಪ್ರಕರಣಗಳು ಹಾಗೂ ಇ–ಚಲನ್ ಪೊಲೀಸ್ ಪ್ರಕರಣಗಳಿಗೆ 50% ರಿಯಾಯಿತಿ ನೀಡಲಾಗುತ್ತದೆ ಎಂದರು. ಈ ರಿಯಾಯಿತಿ 21.11.2025ರಿಂದ 12.12.2025ರೊಳಗೆ ಬಾಕಿ ದಂಡ ಪಾವತಿಸುವವರಿಗೆ ಮಾತ್ರ ಅನ್ವಯಿಸುತ್ತದೆ. ಸಾರ್ವಜನಿಕರು ಈ ಸುವರ್ಣ ಅವಕಾಶವನ್ನು ಬಳಸಿಕೊಂಡು ತಮ್ಮ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಬೇಕು” ಎಂದು ಅವರು ಮನವಿ ಮಾಡಿದರು.
ರಾಷ್ಟ್ರಕ್ಕಾಗಿ ಸಂಧಾನ ಎಂಬ ಶೀರ್ಷಿಕೆಯಲ್ಲಿ ಕಳೆದ 90 ದಿನಗಳ ಡ್ರೈವ್‌ನಲ್ಲಿ ದೊಡ್ಡ ಪ್ರಮಾಣದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಜೈಬುನ್ನೀಸ ತಿಳಿಸಿದ್ದಾರೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಸಾರಿಗೆ ಇಲಾಖೆ ಸಾರ್ವಜನಿಕರಿಗೆ ರಿಯಾಯಿತಿ ಮತ್ತು ರಾಜಿ ಅವಕಾಶವನ್ನು ಬಳಸಿಕೊಳ್ಳುವಂತೆ ಕರೆ ನೀಡಿದೆ.