ಕೆಸಿವಿ ಹೈಕಮಾಂಡಿನ ಏಜೆಂಟ್-‌ ಅಶೋಕ್ ಹೇಳಿಕೆ ಖಂಡನೀಯ: ‘ನಮ್ಮ ಪಕ್ಷದ ವಿಚಾರಕ್ಕೆ ಕೈ ಹಾಕಬೇಡಿ’: ರಮಾನಾಥ ರೈ ಕಿಡಿ

 

ಮಂಗಳೂರು: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು “ಹೈಕಮಾಂಡ್‌ನ ಏಜೆಂಟ್” ಎಂದು ರಾಜ್ಯ ವಿಪಕ್ಷ ನಾಯಕ ಆರ್. ಅಶೋಕ್ ಬಣ್ಣಿಸಿದ ಹೇಳಿಕೆಗೆ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಬಿ. ರಮಾನಾಥ ರೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್‌ ಭವನದಲ್ಲಿ ಸುದ್ದಿಗೋಷ್ಠಿ ಕರೆದಿದ್ದ ರೈ, “ವೇಣುಗೋಪಾಲ್‌ ನಮ್ಮ ಪಕ್ಷದ ಸಂಘಟನೆಗೆ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿರುವವರು. ನಿಮ್ಮ ಪಕ್ಷದಿಂದಲೂ ಉಸ್ತುವಾರಿಗಳು ರಾಜ್ಯಕ್ಕೆ ಬರುತ್ತಾರೆ. ಹಾಗಾದರೆ ಅವರಿಗೆ ನೀವು ಏನೆನ್ನುತ್ತೀರಿ? ಇಂಥ ಹೇಳಿಕೆ ಅಶೋಕ್ ಗೆ ಶೋಭೆ ತರಲ್ಲ,” ಎಂದು ತಿರುಗೇಟು ನೀಡಿದರು.

ರೈ ಮುಂದುವರಿದು, “ನೀವು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೀರಿ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಆಡಳಿತದ ಬದಲು ಭ್ರಷ್ಟಾಚಾರವನ್ನೇ ನಡೆಸಿದವರು ನೀವು. ಈಗ ನಮ್ಮ ಪಕ್ಷದ ಒಳಗಿನ ವಿಚಾರಕ್ಕೆ ಬಾಯಿ ಹಾಕುವುದು ನಾಚಿಕೆಗೀಡು. ಕಾಂಗ್ರೆಸ್‌ನ ಒಳಗಿನ ವಿಚಾರವನ್ನು ನಾವು ನೋಡಿಕೊಳ್ಳುತ್ತೇವೆ, ನಿಮ್ಮ ಪಕ್ಷದ ವಿಚಾರಕ್ಕೂ ನಾವು ಬರುವುದಿಲ್ಲ,” ಎಂದು ರೈ ಖಡಕ್‌ ಎಚ್ಚರಿಕೆ ನೀಡಿದರಿ.

ಬಿಹಾರ ಚುನಾವಣೆಯಲ್ಲಿ ಬಿಜೆಪಿ ನೀಡಿದ್ದ ಭರವಸೆಗಳನ್ನು ಟೀಕಿಸಿದ ರೈ, “ನಾವು ಅಕ್ಕಿ ಭಾಗ್ಯ ಮಾಡಿದರೆ ನೀವು ಭಿಟ್ಟಿ ಭಾಗ್ಯ ಅಂತೀರಾ? ಆದರೆ ಬಿಹಾರದಲ್ಲಿ ವರ್ಷಕ್ಕೆ 10 ಸಾವಿರ ರೂಪಾಯಿ ಕೊಡುವುದಾಗಿ ಆಮಿಷ ನೀಡಿ ಸರ್ಕಾರ ರಚಿಸಿದವರು ಯಾರು? ನಾವು ಮಾಡಿದರೆ ʻರೇವಡಿʼ, ನೀವು ಮಾಡಿದರೆ ಪವಿತ್ರ ಸೇವೆನಾ? ಮಹಾರಾಷ್ಟ್ರ ಚುನಾವಣೆಗೆ ಮೊದಲು ಲಾಡ್ಲಿ ಬೇಹೆನ್ ಯೋಜನೆ ಘೋಷಿಸಿರುವುದು ಇದೇ ‘ರೇವಡಿ ಕಲ್ಚರ್’ ಅಲ್ಲವೆ?” ಎಂದು ಪ್ರಶ್ನಿಸಿದರು.

ಇತ್ತೀಚೆಗೆ ಚೀಪ್ ಜಸ್ಟೀಸ್‌ರನ್ನು ಪದವಿಯಿಂದ ತೆರವುಗೊಳಿಸಿರುವ ಕ್ರಮ ದೇಶದ ಚುನಾವಣಾ ವ್ಯವಸ್ಥೆಯ ಮೇಲಿನ ನಂಬಿಕೆಗೆ ನೀಡಿದ ದೊಡ್ಡ ಹೊಡೆತ ಎಂದು ಆರೋಪಿಸಿದ ರೈ, “ಸರ್ಕಾರಿ ಸೌಲಭ್ಯಗಳನ್ನು ಆಮಿಷವಾಗಿ ಬಳಸುವ ‘ರೇವಡಿ ಕಲ್ಚರ್’ ಈಗ ವ್ಯವಸ್ಥೆಯನ್ನೇ ದುರ್ಬಲಗೊಳಿಸಿದೆ. ಕೆಲವು ಕ್ಷೇತ್ರಗಳಲ್ಲಿ 10 ಸಾವಿರ ಮತಗಳ ಅಂತರ ಕಂಡುಬಂದಿರುವುದು ಸಹ ಅನುಮಾನ ಹುಟ್ಟಿಸುವಂತೆ ಮಾಡಿದೆ. ಇದು ಚುನಾವಣೆ ಪ್ರಕ್ರಿಯೆಯ ಮೇಲೆ ಅಪಾಯಕಾರಿ ಪ್ರಭಾವ ಬೀರುತ್ತಿದೆ” ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಬೇಬಿ ಕುಂದರ್, ಮಾಜಿ ಮೇಯರ್ ಅಶ್ರಫ್, ಅಪ್ಪಿ ಸೇರಿದಂತೆ ಹಲವರು ಹಾಜರಿದ್ದರು.

error: Content is protected !!