ತಿರುವನಂತಪುರ: ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಸೋನಿಯಾ ಗಾಂಧಿ ಇದೀಗ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಭರ್ಜರಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

ಹೌದು ಕೇರಳದಲ್ಲಿ ಸ್ಥಳೀಯಾಡಳಿತ ಚುನಾವಣೆ ನಡೆಯುತ್ತಿದ್ದು, ಮುನ್ನಾರ್‌ನ 16ನೇ ವಾರ್ಡ್‌ನಲ್ಲಿ ಬಿಜೆಪಿಯಿಂದ ಸೋನಿಯಾ ಗಾಂಧಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸುತ್ತಿರುವ ಸೋನಿಯಾ ಗಾಂಧಿ ಎಲ್ಲರ ಗಮನ ಸೆಳೆದಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಇವರದ್ದೇ ಸುದ್ದಿ ಹರಿದಾಡುತ್ತಿದೆ.
ಯಾರು ಈ ಸೋನಿಯಾ ಗಾಂಧಿ?
ಕಾಂಗ್ರೆಸ್ ಕಾರ್ಯಕರ್ತ ಧುರೆ ರಾಜ್ ಎಂಬವರು ಕಾಂಗ್ರೆಸ್‌ನ ಕಟ್ಟರ್ ಕಾರ್ಯಕರ್ತರಾಗಿದ್ದರು. ಇವರಿಗೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅಂದರೆ ಎಲ್ಲಿಲ್ಲದ ಪ್ರೀತಿ. ಅವರ ಮೇಲಿನ ಮೆಚ್ಚುಗೆಯಿಂದ ತನ್ನ ಪುತ್ರಿಗೆ ʻಸೋನಿಯಾ ಗಾಂಧಿʼ ಎಂದೇ ಹೆಸರಿಟ್ಟಿದ್ದರು. ಆದರೆ ಇದೇ ಸೋನಿಯಾ ಗಾಂಧಿ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಸುಭಾಷ್ ಎಂಬವರನ್ನು ಸೋನಿಯಾ ಗಾಂಧಿ ಮದುವೆಯಾಗಿದ್ದರು. ಹೀಗಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಪತಿಯ ರಾಜಕೀಯ ಹಾದಿಯನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಸೋನಿಯಾ ಗಾಂಧಿ ಹೆಸರಿನಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಉಂಟಾಗಿದ್ದರೂ, ಬಿಜೆಪಿಗರಿಗೆ ಇದೊಂದು ಖುಷಿಯ ವಿಷಯವಾಗಿದೆ. ಅಂದಹಾಗೆ ಕೇರಳ ಸ್ಥಳೀಯಾಡಳಿತಕ್ಕೆ ಡಿಸೆಂಬರ್ 9 ಹಾಗೂ 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 13ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
