ಶಬರಿಮಲೆ ಅರಣ್ಯ ಮಾರ್ಗದಲ್ಲಿ ಸನ್ನಿಧಾನಕ್ಕೆ ತೆರಳುವ ಭಕ್ತರಿಗೆ‌ ಇಲಾಖೆಯಿಂದ ಮಹತ್ವದ ಸೂಚನೆ!

ಪತನಾಂತಿಟ್ಟ: ಶಬರಿಮಲೆ ಸತ್ರ–ಪುಲ್ಲುಮೇಡು–ಸನ್ನಿಧಾನಂ ಅರಣ್ಯ ಮಾರ್ಗದಲ್ಲಿ ಯಾತ್ರಿಕರ ಸಂಚಾರ ದಿನೇದಿನೇ ಹೆಚ್ಚುತ್ತಿದ್ದು, ಪ್ರತಿದಿನ 1,500ರಿಂದ 2,000 ಯಾತ್ರಿಕರು ಈ ಮಾರ್ಗದ ಮೂಲಕ ಸನ್ನಿಧಾನ ತಲುಪುತ್ತಿರುವುದಾಗಿ ಅರಣ್ಯ ಇಲಾಖೆ ತಿಳಿಸಿದೆ. ಸತ್ರದಿಂದ ಸನ್ನಿಧಾನಂವರೆಗೆ ಸುಮಾರು 12 ಕಿ.ಮೀ. ಇರುವ ಈ ಅರಣ್ಯ ಮಾರ್ಗದಲ್ಲಿ ಸುರಕ್ಷತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ.

ಹವಾಮಾನಕ್ಕೆ ಅನುಗುಣವಾಗಿ ಯಾತ್ರಿಕರಿಗೆ ಅರಣ್ಯ ಮಾರ್ಗ ಬಳಕೆಗೆ ಅವಕಾಶ ನೀಡಲಾಗುತ್ತಿದ್ದು, ಬೆಳಿಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಸತ್ರದಿಂದ ಸನ್ನಿಧಾನಕ್ಕೆ ಮತ್ತು ಬೆಳಿಗ್ಗೆ 8ರಿಂದ 11ರವರೆಗೆ ಸನ್ನಿಧಾನದಿಂದ ಸತ್ರಕ್ಕೆ ಹಿಂತಿರುಗುವ ಅವಕಾಶ ನೀಡಲಾಗಿದೆ. ದೇವಸ್ವಂ ಮಂಡಳಿ ಸತ್ರದಲ್ಲಿ ಬುಕಿಂಗ್ ವ್ಯವಸ್ಥೆಯನ್ನು ಒದಗಿಸಿದ್ದು, ಅನುಮತಿ ಪಡೆದ ಯಾತ್ರಿಕರಿಗೆ ಮಾತ್ರ ಪ್ರವೇಶವಿದೆ.

ಅರಣ್ಯ ಮಾರ್ಗದ ಸುರಕ್ಷತೆಯನ್ನು ಖಚಿತಪಡಿಸಲು 35 ಅರಣ್ಯ ಅಧಿಕಾರಿ–ಸಿಬ್ಬಂದಿ ಹಾಗೂ 35 ಪರಿಸರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ, ಆನೆ ದಳದ ಸೇವೆಗಳನ್ನು ಸಹ ಈ ಮಾರ್ಗದಲ್ಲಿ ಬಳಸಲಾಗುತ್ತಿದ್ದು, ಕಾಡುಪ್ರಾಣಿಗಳ ಅಸ್ತಿತ್ವವನ್ನು ಪರಿಶೀಲಿಸುವ ಕಾರ್ಯಕ್ಕೆ ವಿಶೇಷ ತಂಡವನ್ನು ನಿಯೋಜಿಸಲಾಗಿದೆ ಎಂದು ಅಝುತಾ ರೇಂಜ್ ಆಫೀಸರ್ ಡಿ. ಬನ್ನಿ ತಿಳಿಸಿದ್ದಾರೆ.

ಮಳೆ ಬಂದ ಸಂದರ್ಭಗಳಲ್ಲಿ ಕಝುತಾಕುಳಿಯ ನಂತರದ ಪ್ರದೇಶ ಕೆಸರುಮಯವಾಗುವ ಕಾರಣ ಅರಣ್ಯ ಮಾರ್ಗ ಬಳಕೆಯಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಉಪ್ಪುಪಾರ ಪೊಲೀಸ್ ಹೊರಠಾಣೆಯಲ್ಲಿ ಯಾತ್ರಿಕರ ದಾಖಲೆ ಪರಿಶೀಲನೆ ನಡೆಯುತ್ತಿದ್ದು, ಅರಣ್ಯ ಇಲಾಖೆಯೊಂದಿಗೆ ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಸೇವೆಗಳನ್ನು ಮಾರ್ಗಮಧ್ಯೆ ವ್ಯವಸ್ಥೆ ಮಾಡಲಾಗಿದೆ.

ಉಪ್ಪುಪಾರದಲ್ಲಿ ವೈದ್ಯರ ತಂಡದ ನೇತೃತ್ವದಲ್ಲಿ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಝೀರೋ ಪಾಯಿಂಟ್ ಮತ್ತು ಉಪ್ಪುಪಾರದಲ್ಲಿ ಆಂಬ್ಯುಲೆನ್ಸ್‌ಗಳನ್ನೂ ನಿಯೋಜಿಸಲಾಗಿದೆ. ಯಾತ್ರಿಕರಿಗಾಗಿ ಇರಿಕಪ್ಪರ, ಸೀತಕುಲಂ ಹಾಗೂ ಝೀರೋ ಪಾಯಿಂಟ್‌ನಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿದೆ. ಉಪ್ಪುಪಾರ ಬೇಸ್‌ನಲ್ಲಿ ಚಹಾ ಮತ್ತು ತಿಂಡಿ, ಕಝುತಕುಳಿಯಲ್ಲಿ ಅರಣ್ಯ ಅಭಿವೃದ್ಧಿ ಸಂಸ್ಥೆಯ ವತಿಯಿಂದ ನಿಂಬೆ ನೀರು ಮತ್ತು ಬಿಸಿನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಅರಣ್ಯ ಮಾರ್ಗದ ಮೂಲಕ ಆಗಮಿಸುವ ಯಾತ್ರಿಕರ ವಿವರಗಳನ್ನು ಸನ್ನಿಧಾನಂ ಬಳಿಯ ಅರಣ್ಯ ಮತ್ತು ಪೊಲೀಸ್ ಚೆಕ್‌ಪೋಸ್ಟ್‌ಗಳಲ್ಲಿ ನಿಖರವಾಗಿ ದಾಖಲಿಸಲಾಗುತ್ತಿದ್ದು, ಯಾತ್ರಿಕರ ಸುರಕ್ಷತೆಯೇ ಇಲಾಖೆಯ ಆದ್ಯತೆಯಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!