ನವದೆಹಲಿ: ಮಹಾರಾಷ್ಟ್ರದ ಅಹಲ್ಯಾನಗರದ 19 ವರ್ಷದ ವೇದಮೂರ್ತಿ ದೇವವ್ರತ ಮಹೇಶ್ ರೇಖೆ, ವಾರಣಾಸಿಯ ವಲ್ಲಭ್ರಂ ಶಾಲಿಗ್ರಾಮ ಸಂಗವೇದ ವಿದ್ಯಾಲಯದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಇವರು ಅಕ್ಟೋಬರ್ 2 ರಿಂದ ನವೆಂಬರ್ 30ರವರೆಗೆ 50 ದಿನಗಳ ಕಾಲ ಶುಕ್ಲ ಯಜುರ್ವೇದದ ಮಧ್ಯಂದಿನಿ ಶಾಖೆಯ 2,000 ಕ್ಕೂ ಹೆಚ್ಚು ಮಂತ್ರಗಳನ್ನು ಒಳಗೊಂಡ ದಂಡಕ್ರಮ ಪಾರಾಯಣವನ್ನು ಅಡೆತಡೆ ಇಲ್ಲದೆ ಸಂಪೂರ್ಣ ಪಾರಾಯಣ ಮಾಡಿ ಹೊಸ ದಾಖಲೆ ಬರೆದಿದ್ದಾರೆ. ಈ ಸಾಧನೆ 200 ವರ್ಷಗಳಲ್ಲಿ ಮೊದಲ ಬಾರಿಗೆ ಕಾಶಿಯಲ್ಲಿ ನಡೆದಿದೆ. ಇದಕ್ಕೂ ಮೊದಲು, ಸುಮಾರು ಎರಡು ಶತಮಾನಗಳ ಹಿಂದೆ ಮಹಾರಾಷ್ಟ್ರದ ನಾಸಿಕ್‌ನ ವೇದಮೂರ್ತಿ ನಾರಾಯಣ ಶಾಸ್ತ್ರಿ ದೇವ್ ಈ ಪವಿತ್ರ ಪಾರಾಯಣವನ್ನು ನಡೆಸಿದ್ದರು.
ಪ್ರಧಾನಿ ಮೋದಿ ಶ್ಲಾಘನೆ
ಪ್ರಧಾನಿ ನರೇಂದ್ರ ಮೋದಿ ದೇವವ್ರತ ಮಹೇಶ್ ರೇಖೆಗೆ ಮೆಚ್ಚುಗೆಯ ಸಂದೇಶ ಕಳುಹಿಸಿದ್ದು, **“19 ವರ್ಷದ ವೇದಮೂರ್ತಿ ದೇವವ್ರತ ಸಾಧಿಸಿದುದು ಮುಂದಿನ ಪೀಳಿಗೆಗಳಿಗೂ ಸ್ಮರಣೀಯವಾಗಲಿದೆ. ಭಾರತೀಯ ಸಂಸ್ಕೃತಿ ಮತ್ತು ಗುರು-ಪರಂಪರೆಯ ಒಳ್ಳೆಯ ಉದಾಹರಣೆ ಅವರು” ಎಂದು ಎಕ್ಸ್‌ನಲ್ಲಿ ಬರೆದು ಗೌರವ ಸೂಚಿಸಿದರು.
ಮೋದಿ ಮುಂದುವರಿದು, “ಕಾಶಿಯ ಸಂಸತ್ ಸದಸ್ಯನಾಗಿ, ಈ ಪವಿತ್ರ ನಗರದಲ್ಲಿ ಅಸಾಧಾರಣ ಸಾಧನೆ ನಡೆದಿರುವುದು ಹೆಮ್ಮೆಯ ವಿಷಯ. ದೇವವ್ರತರಿಗೆ, ಅವರ ಕುಟುಂಬಕ್ಕೆ, ಅವರಿಗೆ ಬೆಂಬಲ ನೀಡಿದ ಸಂತರು–ಋಷಿಗಳನ್ನು ನಾನು ನಮಸ್ಕರಿಸುತ್ತೇನೆ” ಎಂದರು.
ಶೃಂಗೇರಿ ಮಠದಿಂದ ಗೌರವ
ದೇವವ್ರತ ಅವರ ತಂದೆ ಮತ್ತು ಗುರು ಮಹೇಶ್ ಚಂದ್ರಕಾಂತ್ ರೇಖೆ ಅವರ ಮಾರ್ಗದರ್ಶನದಲ್ಲಿ ಈ ಪಾರಾಯಣ ನೆರವೇರಿತು. ಈ ಸಾಧನೆಗೆ ಮಾನ್ಯತೆ ನೀಡಿದ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯರು ದೇವವ್ರತರಿಗೆ ಚಿನ್ನದ ಆಭರಣ ಹಾಗೂ ₹1,11,116 ನೀಡಿ ವಿಶೇಷ ಸನ್ಮಾನ*ಮಾಡಿದರು.
ವಾರಣಾಸಿಯಲ್ಲಿ ರಥಯಾತ್ರ ಚೌಕದಿಂದ ಮಹಮೂರ್‌ಗಂಜ್ ವರೆಗೆ ವಿಶೇಷ ಮೆರವಣಿಗೆಯೂ ನಡೆದಿದ್ದು, ಭಕ್ತರು ಮತ್ತು ವೇದಾಭಿಮಾನಿಗಳು ಪಾಲ್ಗೊಂಡು ದೇವವ್ರತರಿಗೆ ಗೌರವ ಸಲ್ಲಿಸಿದರು.
ಕಾಶಿಯ ಪವಿತ್ರ ವಾತಾವರಣದಲ್ಲಿ ನಡೆದ ಈ ದುರ್ಲಭ ದಂಡಕ್ರಮ ಪಾರಾಯಣ, ವೇದಾಧ್ಯಯನದ ಪರಂಪರೆ ಮತ್ತು ಭಾರತೀಯ ಸಂಸ್ಕೃತಿಯ ಆಳವಾದ ಬಿಂಬವನ್ನು ಮತ್ತೊಮ್ಮೆ ಲೋಕದ ಮುಂದಿಟ್ಟಿದೆ.