ವಾಷಿಂಗ್ಟನ್/ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಎದ್ದಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಡೀ ಜಗತ್ತೇ ಬೆಚ್ಚಿಬೀಳುವಂತಹ ಹೇಳಿಕೆ ನೀಡಿದ್ದಾರೆ. ಇರಾನ್‌ನ ಸುಪ್ರೀಂ ಲೀಡರ್ ಖಮೇನಿ ಹತ್ಯೆ ಮತ್ತು ಪ್ರಮುಖ ಸೇನಾ ನೆಲೆಗಳ ಧ್ವಂಸದ ನಂತರ ಅಬ್ಬರಿಸಿರುವ ಟ್ರಂಪ್, “ನಾವು ಜಗತ್ತನ್ನು ಪರಮಾಣು ವಿನಾಶದಿಂದ ರಕ್ಷಿಸಿದ್ದೇವೆ” ಎಂದು ಘೋಷಿಸಿದ್ದಾರೆ.

ಒಬಾಮಾ-ಬೈಡನ್ ವಿರುದ್ಧ ಗುಡುಗು:
“ಮಾಜಿ ಅಧ್ಯಕ್ಷ ಒಬಾಮಾ ಮಾಡಿಕೊಂಡಿದ್ದ ಆ ಭಯಾನಕ ಇರಾನ್ ಪರಮಾಣು ಒಪ್ಪಂದವನ್ನು ನಾನು ರದ್ದುಗೊಳಿಸದೇ ಇರುತ್ತದ್ದರೆ, 2023ರ ವೇಳೆಗೆ ಇರಾನ್ ಕೈಯಲ್ಲಿ ಅಣ್ವಸ್ತ್ರಗಳಿರುತ್ತಿದ್ದವು. ಅವರು ಅದನ್ನು ಈಗಾಗಲೇ ನಮ್ಮ ಮೇಲೆ ಬಳಸುತ್ತಿದ್ದರು. ಆ ಅಪಾಯವನ್ನು ತಡೆಯುವ ಮೂಲಕ ನಾನು ಜಗತ್ತನ್ನು ಮಹಾ ವಿನಾಶದಿಂದ ಪಾರು ಮಾಡಿದ್ದೇನೆ” ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಇರಾನ್‌ನ ದೀರ್ಘ ವ್ಯಾಪ್ತಿಯ ಕ್ಷಿಪಣಿಗಳು ಅಮೆರಿಕ ಮತ್ತು ಯುರೋಪ್ ಅನ್ನು ಗುರಿಯಾಗಿಸಿಕೊಂಡಿದ್ದವು. ಆ ಭೀತಿಯನ್ನು ಈಗಿನ ಈ ಜಂಟಿ ದಾಳಿಯು ಶಾಶ್ವತವಾಗಿ ಅಂತ್ಯಗೊಳಿಸಿದೆ ಎಂಬುದು ವೈಟ್ ಹೌಸ್‌ನ ವಾದ.

ಇಸ್ರೇಲ್ ಪ್ರಧಾನಿ ನೆತನ್ಯಾಹು ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದು, “ಇದು ಕೇವಲ ಯುದ್ಧವಲ್ಲ, ನಾಗರಿಕ ಜಗತ್ತನ್ನು ಉಳಿಸಲು ನಾವು ಮಾಡುತ್ತಿರುವ ಹೋರಾಟ” ಎಂದು ಬಣ್ಣಿಸಿದ್ದಾರೆ.
ತನ್ನ ನಾಯಕನ ಸಾವಿನಿಂದ ಕೆರಳಿರುವ ಇರಾನ್, “ಅಮೆರಿಕ ಮತ್ತು ಇಸ್ರೇಲ್ ಇತಿಹಾಸದಲ್ಲೇ ಕಾಣದಂತಹ ಭೀಕರ ಶಿಕ್ಷೆಯನ್ನು ಅನುಭವಿಸಲಿವೆ” ಎಂದು ಎಚ್ಚರಿಸಿದೆ. ಈಗಾಗಲೇ ಅಮೆರಿಕದ 14 ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮಳೆ ಸುರಿಯುತ್ತಿದೆ. ತೈಲ ಬಿಕ್ಕಟ್ಟು ಮತ್ತು ಆರ್ಥಿಕ ನಡುಕ: ಈ ಸಂಘರ್ಷದಿಂದಾಗಿ ಪೆಟ್ರೋಲ್ ಬೆಲೆ ಗಗನಕ್ಕೇರಿದ್ದು, ಜಾಗತಿಕ ಆರ್ಥಿಕತೆ ಕುಸಿಯುವ ಭೀತಿ ಎದುರಾಗಿದೆ. ಯುದ್ಧದ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ CBSE ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ಅಲ್ಲಿರುವ ಲಕ್ಷಾಂತರ ಭಾರತೀಯರು ಈಗ ಅನಿಶ್ಚಿತತೆಯ ಸುಳಿಯಲ್ಲಿದ್ದಾರೆ.
