ಬೆಂಗಳೂರು: ಕರ್ನಾಟಕ ರಾಜಕೀಯ ವಲಯದಲ್ಲಿ ಕಳೆದ ಒಂದು ವಾರದಿಂದ ಚರ್ಚೆಗೆ ಗ್ರಾಸವಾಗಿರುವ ಸಿದ್ದರಾಮಯ್ಯ–ಡಿ.ಕೆ.ಶಿವಕುಮಾರ್ ಪವರ್ ಶೇರಿಂಗ್ ಅಂತರ್ಯುದ್ಧ ಮಂಗಳವಾರ ಮತ್ತೊಂದು ಹಂತಕ್ಕೆ ತಲುಪಿದೆ. ಉಪ ಮುಖ್ಯಮಂತ್ರಿ ಡಿಕೆಶಿ ಅವರ ನಿವಾಸದಲ್ಲಿ ನಡೆದ ‘ಪವರ್ ಬ್ರೇಕ್‌ಫಾಸ್ಟ್’ ಸಭೆಯಲ್ಲಿ ಇಬ್ಬರು ನಾಯಕರು ಮುಖಾಮುಖಿಯಾಗಿದ್ದರೂ, ಪರಿಹಾರ ಸ್ಪಷ್ಟವಾಗದೆ ಗೊಂದಲ ಮುಂದುವರಿಯುತ್ತಿದೆ. ಮೂಲಗಳ ಪ್ರಕಾರ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರಕ್ಕೆ ಸಮ್ಮತಿ ಸೂಚಿಸಿದ್ದಾರೆಂದು ಹೇಳಲಾಗುತ್ತಿದೆ.
2023ರ ಚುನಾವಣೆಯ ನಂತರ ಕಾಂಗ್ರೆಸ್ ಒಳಗಡೆ 2.5–2.5 ವರ್ಷಗಳ ಅಧಿಕಾರ ಹಂಚಿಕೆ ಒಪ್ಪಂದ ನಡೆದಿದ್ದು, ಅದೀಗ ಮತ್ತೆ ಚರ್ಚೆಗೆ ಬಂದಿದ್ದು, ಡಿಸೆಂಬರ್ ಮೊದಲ ವಾರದಲ್ಲಿಯೇ ಕಾಂಗ್ರೆಸ್‌ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗುವ ಲಕ್ಷಣ ಗೋಚರಿಸಿದ್ದು, ರಾಜಕೀಯದ ಅತ್ಯಂತ ನಿರ್ಣಾಯಕವಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಸಭೆಯ ನಂತರ ಮಾತನಾಡಿದ ಸಿದ್ದರಾಮಯ್ಯ, “ಪಕ್ಷದ ಹಿರಿಯ ನಾಯಕರು—ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವದ್ರಾ ಮತ್ತು ಖರ್ಗೆ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾವು ಬದ್ಧ. ಪಕ್ಷ ಹೇಳಿದರೆ ಹಿಂತೆಗೆದುಕೊಳ್ಳಲು ಸಿದ್ದ” ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಪಕ್ಷದೊಳಗಿನ ಅಧಿಕಾರ ವರ್ಗಾವಣೆಯ ಚರ್ಚೆಗೆ ಮತ್ತೊಂದು ಬಲ ಬಂದಂತಾಗಿದೆ.
ಪಕ್ಷ ಮೂಲಗಳ ಪ್ರಕಾರ, ಡಿಸೆಂಬರ್ 8ರಂದು ಇಬ್ಬರು ನಾಯಕರನ್ನೂ ದೆಹಲಿಗೆ ಕರೆಯುವ ಸಾಧ್ಯತೆ ಹೆಚ್ಚಾಗಿದೆ. ಮೇಲ್ನೋಟಕ್ಕೆ ಇದು ರಾಜ್ಯದ ರೈತರ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ಭೇಟಿ ಎಂದು ಹೇಳಲಾಗುತ್ತಿದ್ದರೂ, ಅಂತಿಮವಾಗಿ ಅಲ್ಲಿ ಅಧಿಕಾರ ವರ್ಗಾವಣೆಯ ಅಂತಿಮ ಮಾತುಕತೆ ನಡೆಯುವ ಸಾಧ್ಯತೆ ಹೆಚ್ಚಿದೆ.
ಅಧಿಕಾರ ಹಸ್ತಾಂತರದ ಗಡುವು ಕಳೆದ ತಿಂಗಳೇ ಪೂರಣವಾಗಿದ್ದರೂ ಬದಲಾವಣೆ ಆಗದ ಹಿನ್ನೆಲೆ, ಡಿಕೆಶಿ ಶಿಬಿರದ ಕೆಲವು ಶಾಸಕರು ದೆಹಲಿ ಚಳುವಳಿ ನಡೆಸಿದ್ದು, ‘ಸಿದ್ದರಾಮಯ್ಯ ವಾಗ್ದಾನ ಪಾಲಿಸಲಿ’ ಎಂಬ ಒತ್ತಡ ತಂತ್ರ ತೀವ್ರಗೊಂಡಿದೆ.
ಈ ನಡುವೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿಲುವು ಸ್ಪಷ್ಟವಾಗಿದೆ. “ಆ ಮಾತು ನನ್ನ ಸಮ್ಮುಖದಲ್ಲೇ ಕೊಟ್ಟದ್ದು… ಪಾಲಿಸಲೇಬೇಕು, ಇಲ್ಲವಾದರೆ ನನಗೆ ರಾಜ್ಯದಲ್ಲಿ ವಿಶ್ವಾಸಾರ್ಹತೆ ಉಳಿಯುವುದಿಲ್ಲ” ಎಂಬ ಅವರ ಹೇಳಿಕೆಯನ್ನು ಪಕ್ಷದ ಒಳಗಿನವರು ಗಂಭೀರ ಸೂಚನೆಯಾಗಿ ನೋಡುತ್ತಿದ್ದಾರೆ.
ಸಿದ್ದರಾಮಯ್ಯ ಬಣ ಅಧಿಕಾರಾವಧಿ ಪೂರ್ಣಗೊಳಿಸಿ 2028ರ ಚುನಾವಣೆಗೆ ಡಿಕೆಶಿಗೆ ಬೆಂಬಲ ನೀಡುವ ತಂತ್ರದತ್ತ ಒಲವು ತೋರಿಸುತ್ತಿದೆ. ಆದರೆ ಡಿಕೆಶಿ ಬಣ, ಪ್ರಸ್ತುತ ರಾಜಕೀಯ ಬೆಳವಣಿಗೆಯಲ್ಲಿ ತಕ್ಷಣದ ಬದಲಾವಣೆಯ ಅಗತ್ಯವಿದೆ ಎಂದು ವಾದಿಸುತ್ತಿದೆ.
ಬಿಜೆಪಿ, ವಿರೋಧ ಪಕ್ಷವಾಗಿ, ಪರಿಸ್ಥಿತಿ ಹೇಗೆ ತಿರುಗಿಕೊಳ್ಳುತ್ತದೆ ಎಂಬುದನ್ನು ಮೌನವಾಗಿ ಗಮನಿಸುತ್ತಿದೆ. ಸಂಖ್ಯಾಬಲ ಲಭ್ಯವಿಲ್ಲದ ಕಾರಣ ಮತದಾನ ನಡೆಸುವ ಯತ್ನಕ್ಕೆ ಪಕ್ಷ ಮುಂದಾಗದಿದ್ದರೂ, ಕಾಂಗ್ರೆಸ್‌ನ ಒಳಗಿನವರಿಗೆ ರಾಜಕೀಯವಾಗಿ ಅವರಿಗೆ ನೆರವಾಗಬಹುದು ಎಂಬ ಲೆಕ್ಕಾಚಾರ ಗೋಚರಿಸುತ್ತದೆ.
ಮುಂದಿನ ವಾರ ಸಿದ್ದರಾಮಯ್ಯ–ಡಿಕೆಶಿ–ಖರ್ಗೆ–ರಾಹುಲ್ ಗಾಂಧಿಯ ನಡುವೆ ನಡೆಯಲಿರುವ ಮುಖಾಮುಖಿ, ಕರ್ನಾಟಕ ಕಾಂಗ್ರೆಸ್ ಸರ್ಕಾರದ ಭವಿಷ್ಯವನ್ನು ನಿರ್ಧರಿಸುವ ‘ಟರ್ನಿಂಗ್ ಪಾಯಿಂಟ್’ ಆಗಿ ಪರಿಣಮಿಸಬಹುದು ಎಂಬುದು ರಾಜಕೀಯ ವಲಯದ ಅಭಿಪ್ರಾಯ.
