ನವದೆಹಲಿ: ಇರಾನ್ ತನ್ನ ಪರಮಾಣು ಇಂಧನವನ್ನು ಸಮೃದ್ಧಗೊಳಿಸುವ ‘ಅನಿರ್ವಾರ್ಯ ಹಕ್ಕು’ ತನಗಿದೆ ಎಂದು ಪಟ್ಟು ಹಿಡಿದದ್ದು ಮತ್ತು ಅಂತರಾಷ್ಟ್ರೀಯ ನಿಯಮಗಳನ್ನು ಮೀರಿ ಸುಮಾರು 460 ಕೆಜಿ ಯುರೇನಿಯಂ ಸಂಗ್ರಹಿಸಿದ್ದು ಇತ್ತೀಚಿನ ಅಮೆರಿಕ-ಇಸ್ರೇಲ್ ಜಂಟಿ ದಾಳಿಗೆ ಪ್ರಮುಖ ಕಾರಣ ಎಂದು ಅಮೆರಿಕದ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಬಹಿರಂಗಪಡಿಸಿದ್ದಾರೆ. ಇರಾನ್ ಸಂಗ್ರಹಿಸಿರುವ ಈ ಯುರೇನಿಯಂನಿಂದ ಸುಮಾರು 11 ಪರಮಾಣು ಬಾಂಬ್‌ಗಳನ್ನು ತಯಾರಿಸಲು ಸಾಧ್ಯವಿತ್ತು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಜಿನೀವಾದಲ್ಲಿ ಕಳೆದ ತಿಂಗಳು ನಡೆದ ಮಾತುಕತೆಯ ವೇಳೆ ಇರಾನ್ ತನ್ನ ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳನ್ನು ನಿಲ್ಲಿಸಲು ನಿರಾಕರಿಸಿತ್ತು. ಅಲ್ಲದೆ, ವೈದ್ಯಕೀಯ ಉದ್ದೇಶದ ಹೆಸರಿನಲ್ಲಿ ಪರಮಾಣು ಕೇಂದ್ರಗಳನ್ನು ಭೂಮಿಯ ಅಡಿಯಲ್ಲಿ 70 ರಿಂದ 80 ಅಡಿ ಆಳದಲ್ಲಿ ನಿರ್ಮಿಸುತ್ತಿರುವುದು ಅಮೆರಿಕದ ಸಂಶಯಕ್ಕೆ ಕಾರಣವಾಗಿತ್ತು. “ವೈದ್ಯಕೀಯ ಉದ್ದೇಶಕ್ಕಾಗಿಯೇ ಆಗಿದ್ದರೆ ಇಷ್ಟು ಆಳದಲ್ಲಿ ರಹಸ್ಯವಾಗಿ ಕೇಂದ್ರಗಳನ್ನು ನಿರ್ಮಿಸುವ ಅಗತ್ಯವೇನಿತ್ತು?” ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪ್ರಶ್ನಿಸಿದ್ದಾರೆ. ಇರಾನ್‌ನ ಈ ನಡೆಯು ಜಾಗತಿಕ ಶಾಂತಿಗೆ ಧಕ್ಕೆ ತರುವಂತದ್ದಾಗಿದೆ ಎಂದು ಅವರು ವಿವರಿಸಿದ್ದಾರೆ.

ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ‘ಬಂಕರ್ ಬಸ್ಟರ್’ ಬಾಂಬ್‌ಗಳನ್ನು ಹಾಕಿ ಧ್ವಂಸಗೊಳಿಸಿತ್ತು. ಆದರೆ, ಈ ದಾಳಿಯ ನಂತರವೂ ಸುಮಾರು 400 ಕೆಜಿ ಯುರೇನಿಯಂ ನಾಪತ್ತೆಯಾಗಿದ್ದು, ಇರಾನ್ ಅದನ್ನು ರಹಸ್ಯವಾಗಿ ಬೇರೆಡೆಗೆ ವರ್ಗಾಯಿಸಿರಬಹುದು ಎಂದು ಶಂಕಿಸಲಾಗಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಶನಿವಾರ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದವು. ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಪ್ರತೀಕಾರವಾಗಿ ಇರಾನ್ ಕೂಡ ಇಸ್ರೇಲ್ ಮತ್ತು ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಅರಬ್ ರಾಷ್ಟ್ರಗಳ ತೈಲ ಶುದ್ಧೀಕರಣ ಕೇಂದ್ರಗಳನ್ನೂ ಗುರಿಯಾಗಿಸಿಕೊಂಡಿದೆ. ಇದರಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದ್ದು, ವಿಶ್ವಕ್ಕೆ ಇಂಧನ ಪೂರೈಸುವ ಪ್ರಮುಖ ಮಾರ್ಗವಾದ ‘ಹೋರ್ಮುಜ್ ಜಲಸಂಧಿ’ಯನ್ನು ಇರಾನ್ ಮುಚ್ಚಿರುವುದು ಆರ್ಥಿಕ ಬಿಕ್ಕಟ್ಟಿನ ಭೀತಿ ಮೂಡಿಸಿದೆ.