ಬೆಂಗಳೂರು: ಕರ್ನಾಟಕದಲ್ಲಿ ಪವರ್ ಶೇರಿಂಗ್ ಪೈಪೋಟಿ ಜೋರಿರುವ ಮಧ್ಯದಲ್ಲಿಯೇ, ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ತಕ್ಷಣದ ಅಪಾಯವಿಲ್ಲ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ಲಭಿಸಿದೆ. ಯಾಕೆಂದರೆ 137 ಕಾಂಗ್ರೆಸ್ ಶಾಸಕರಲ್ಲಿ 100ಕ್ಕೂ ಹೆಚ್ಚು ಶಾಸಕರು, ವಿಶೇಷವಾಗಿ ಅಹಿಂದ–OBC ಸಮುದಾಯಗಳು, ಸಿದ್ದರಾಮಯ್ಯ ಪರವಾಗಿರುವುದು ಸಿದ್ದರಾಮಯ್ಯಗೆ ವರವಾಗಿ ಪರಿಣಮಿಸಿದೆ. ಹೀಗಾಗಿ ನಾಯಕತ್ವ ಬದಲಾವಣೆ ಸಾಧ್ಯತೆಯೇ ಕ್ಷೀಣಿಸಿದೆ.

ಸಿದ್ದರಾಮಯ್ಯ ಕ್ಯಾಬಿನೆಟ್ ಪುನರ್ ರಚನೆ ಮೂಲಕ ಪಕ್ಷದಲ್ಲಿ ತಮ್ಮ ಹಿಡಿತ ಇನ್ನಷ್ಟು ಬಿಗಿಗೊಳಿಸಲು ಮುಂದಾಗಿದ್ದರು. ಆದರೆ ಡಿಕೆಎಸ್ ಗುಂಪಿನ ಒತ್ತಡದ ಹಿನ್ನೆಲೆಯಲ್ಲಿ ಅದು ತಾತ್ಕಾಲಿಕವಾಗಿ ಮುಂದೂಡಲ್ಪಡುವ ಸಾಧ್ಯತೆ ಇದ್ದು, ಪಕ್ಷದೊಳಗಿನ ಅಸಮಾಧಾನ ಮತ್ತಷ್ಟು ಸ್ಪಷ್ಟವಾಗಿದೆ. ಹೀಗಾಗಿ ಶಾಸಕರು ಡಿಕೆಶಿ ಬೆಂಬಲಕ್ಕೆ ನಿಂತಿಲ್ಲ ಎಂದು ಹೇಳಲಾಗುತ್ತಿದೆ.
ಡಿಕೆಶಿಗೆ ವೊಕ್ಕಲಿಗ ಸಮುದಾಯ ಹೊರತುಪಡಿಸಿ ಅಲ್ಪಸಂಖ್ಯಾತರ ಬೆಂಬಲ ಇಲ್ಲ. 2023ರ ಚುನಾವಣೆಯಲ್ಲಿ ಜಡಿಎಸ್‌ನಿಂದ ವೊಕ್ಕಲಿಗರ ಮತಗಳನ್ನು ಕಸಿದು ತಂದ ಕ್ರೆಡಿಟ್ ಮಾತ್ರ ಅವರ ಕಡೆ ಇದೆ. ಉಳಿದ ಸಮುದಾಯಗಳ ಮತಗಳನ್ನು ಕಸಿದಿರುವುದು ಸಿದ್ದರಾಮಯ್ಯ. ಹಾಗಾಗಿ ಆದರೆ ಪಕ್ಷದೊಳಗಿನ ಶಾಸಕರ ಬಹುಮತ ಸಿದ್ದರಾಮಯ್ಯ ಪರವಾಗಿರುವುದರಿಂದ, ವೊಕ್ಕಲಿಗ ಸಮುದಾಯ ಬೆಂಬಲ ಇದೆ ಎಂಬ ಕಾರಣಕ್ಕೆ ಡಿಕೆಎಸ್‌ಗೆ ಮುಖ್ಯಮಂತ್ರಿ ಸ್ಥಾನ ಪಡೆಯಲು ಸಾಕಾಗುವುದಿಲ್ಲ.
ಮೈಸೂರು ವೊಕ್ಕಲಿಗರ ಸಂಘ ಹಾಗೂ ಕೆಲವು ಧಾರ್ಮಿಕ ನಾಯಕರು ಡಿಕೆಎಸ್ ಪರ ಧ್ವನಿ ಎತ್ತಿದರೂ, ನಾಯಕತ್ವ ಬದಲಾವಣೆಯ ರಾಜಕೀಯ ಸಮೀಕರಣಗಳು ತಕ್ಷಣಕ್ಕೆ ಬದಲಾವಣೆಗೆ ಅನುಕೂಲಕರವಾಗಿಲ್ಲ. ಹಾಗಾಗಿ ಈ ಡಿಕೆಎಸ್‌ಗೆ ಮುಖ್ಯಮಂತ್ರಿ ಹುದ್ದೆ ಕನ್ನಡಿಯೊಳಗಿನ ಗಂಟಾಗಿ ಪರಿಣಮಿಸಿದೆ.

ದಿಲ್ಲಿಯಲ್ಲಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಗೊಂದಲದ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದು, ರಾಹುಲ್ ಗಾಂಧಿಗೆ ಡಿಸೆಂಬರ್ 8ರಂದು ಆರಂಭವಾಗುವ ಚಳಿ ಅಧಿವೇಶನಕ್ಕೂ ಮುನ್ನ ನಾಯಕತ್ವ ಕಲಹಕ್ಕೆ ತೆರೆ ಎಳೆಯುವಂತೆ ಹೇಳಿರುವ ಮಾಹಿತಿ ಹೊರಬಿದ್ದಿದೆ.
ಕಾಂಗ್ರೆಸ್ ವಿಭಜನೆಗೊಂಡರೆ ಮುಜುಗರ ಅನುಭವಿಸಬೇಕಾಗುತ್ತದೆ. ಬಿಜೆಪಿಯ ಏಟುಗಳನ್ನೂ ಸಹಿಸಬೇಕು. ಈಗಾಗಲೇ ಕೇವಲ ಮೂರು ರಾಜ್ಯಗಳಲ್ಲಿ ನೇರ ಆಡಳಿತವಿರುವ ಕಾಂಗ್ರೆಸ್ ಮತ್ತೊಂದು ರಾಜ್ಯ ಕಳೆದುಕೊಳ್ಳುವ ಸಾಧ್ಯತೆ ಎದುರಿಸಬಹುದು. ಇದರಿಂದ ಪಕ್ಷದ ವಿಶ್ವಾಸಾರ್ಹತೆ ಮತ್ತಷ್ಟು ಕುಗ್ಗುವ ಆತಂಕ ಇದೆ. ಹಾಗಾಗಿ ಸಿಎಂ ಬದಲಾವಣೆಗೆ ಹೈಕಮಾಂಡ್ ಒಲವಿಲ್ಲ ಎನ್ನಲಾಗುತ್ತಿದೆ.
ಕಾಂಗ್ರೆಸ್ ಹೈಕಮಾಂಡ್ ಮುಂದಿರುವ ಆಯ್ಕೆಗಳೆಂದರೆ ಸಿದ್ದರಾಮಯ್ಯನನ್ನೇ ಮುಂದುವರಿಸುವುದು, ಡಿಕೆಎಸ್‌ಗೆ ಅಧಿಕಾರ ಹಸ್ತಾಂತರ ಅಥವಾ ತಾತ್ಕಾಲಿಕ ಅಥವಾ ಮಧ್ಯಂತರ ಸಿಎಂ ಆಗಿ ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ಆಯ್ಕೆ ಮಾಡುವುದು.
ಸಿದ್ದರಾಮಯ್ಯ ರಾಜೀನಾಮೆ ನೀಡುವುದಿಲ್ಲ ಎಂಬುದು ಸ್ಪಷ್ಟ. ಯಾಕೆಂದರೆ ದೀರ್ಘಕಾಲ ಮುಖ್ಯಮಂತ್ರಿಯಾಗಿ ಮುಂದುವರಿದ ವ್ಯಕ್ತಿ ಎಂಬ ಬಿರುದಿಗೆ ಪಾತ್ರವಾಗಬೇಕಾದ ಹಂತದಲ್ಲಿದ್ದಾರೆ. ಹಾಗಾಗಿ ಸಿದ್ದು ರಾಜೀನಾಮೆ ನೀಡುವುದಿಲ್ಲ, ಹೈಕಮಾಂಡ್ ಇವರಿಂದ ರಾಜೀನಾಮೆಯನ್ನೂ ಕೇಳುವುದಿಲ್ಲ. ಆದರೆ ಡಿಕೆಎಸ್ ಮುಂದೆ ಏನು ಮಾಡುತ್ತಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ.