ಬಂಟ್ವಾಳದಲ್ಲಿ ನಿಲ್ಲದ ಗೋಕಳ್ಳರ ಅಟ್ಟಹಾಸ: ಮುಸುಕುಧಾರಿಗಳಿಂದ ನಾಲ್ಕು ದನಗಳ ಕಳವು

ಬಂಟ್ವಾಳ: ತಾಲೂಕಿನ ಪೆರುವಾಯಿ ಗ್ರಾಮದ ಪೆರುವಾಯಿ ಸೊಸೈಟಿ ಆವರಣದಲ್ಲಿ ಕಟ್ಟಿಹಾಕಿದ್ದ ನಾಲ್ಕು ದನಗಳನ್ನು ರಾತ್ರಿ ವೇಳೆ ಮುಸುಕುಧಾರಿಗಳು ಕಳವುಗೈದ ಘಟನೆ ವರದಿಯಾಗಿದೆ.

ಪೆರುವಾಯಿ ಗ್ರಾಮದ ಅಡಿವಾಯಿ ನಿವಾಸಿಗಳಾದ ಗಣೇಶ್ ರೈ (39) ಮತ್ತು ನಾರಾಯಣ ನಾಯ್ಕ ಇವರಿಗೆ ಸೇರಿದ ತಲಾ ಎರಡು ದನಗಳು ನವೆಂಬರ್ 18ರಂದು ಪೆರುವಾಯಿ ಸೊಸೈಟಿ ಮೈದಾನದಲ್ಲಿ ಮೇಯಲು ಬಿಟ್ಟಿದ್ದರು. ಸಂಜೆವಾದರೂ ದನಗಳು ಮನೆಗೆ ಹಿಂದಿರುಗದೆ, ಸೊಸೈಟಿ ಆವರಣದಲ್ಲೇ ಉಳಿದುಕೊಂಡಿದ್ದ ಕಾರಣ, ಸೊಸೈಟಿ ಸಿಬ್ಬಂದಿ ಸುರಕ್ಷತಾ ದೃಷ್ಟಿಯಿಂದ ಗೇಟಿಗೆ ಬೀಗ ಹಾಕಿ ತೆರಳಿದ್ದರು.

ಆದರೆ ನವೆಂಬರ್ 19ರ ಬೆಳಿಗ್ಗೆ ಗೇಟು ತೆರೆದು ನೋಡಿದಾಗ ನಾಲ್ಕೂ ದನಗಳು ಆವರಣದಿಂದ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ದನಗಳ ಮಾಲೀಕರು ಮತ್ತು ಸಿಬ್ಬಂದಿ ಸೇರಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಕಳ್ಳತನದ ಸಂಪೂರ್ಣ ಕೃತ್ಯ ಬಹಿರಂಗವಾಯಿತು.

ನಸುಕಿನ ಜಾವ ಮೂವರು ಮುಸುಕುಧಾರಿಗಳು ಸೊಸೈಟಿಯ ಬಳಿ ಬಂದು, ಗೇಟಿನ ಬೀಗ ಮುರಿದು ಒಳಗೆ ಪ್ರವೇಶಿಸಿರುವುದು ದೃಶ್ಯದಲ್ಲಿ ಕಂಡಿದ್ದು, ಬಳಿಕ ಆವರಣದಲ್ಲಿದ್ದ ದನಗಳನ್ನು ಬಲವಂತವಾಗಿ ಎಳೆದುಕೊಂಡು ಹೋಗುತ್ತಿರುವುದೂ ಕ್ಯಾಮೆರಾದಲ್ಲಿ ದಾಖಲಾಗಿದೆ.

ಈ ಕುರಿತು ದನಗಳನ್ನು ಕಳೆದುಕೊಂಡ ಗಣೇಶ್ ರೈ ಅವರು ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

 

error: Content is protected !!