ಮಂಗಳೂರು: “ನಾರಾಯಣ ಗುರು–ಗಾಂಧಿ ಸಂವಾದ ಶತಮಾನೋತ್ಸವದ ಕುರಿತು ಮಾತನಾಡಲು ನಾನು ಇಲ್ಲಿ ಬಂದಿದ್ದೇನೆ. ʻನವೆಂಬರ್ 26ರ ಕ್ರಾಂತಿʼಯ ಬಗ್ಗೆ ಈಗ ಏನನ್ನೂ ಹೇಳುವುದಿಲ್ಲ. ಮತ್ತೊಮ್ಮೆ ಬಂದಾಗ ಆ ವಿಷಯವನ್ನೂ ಮಾತನಾಡುತ್ತೇನೆ. ನವೆಂಬರ್ ಕ್ರಾಂತಿ ಏನೇ ಇದ್ದರೂ 26ರ ನಂತರ ಮಾತನಾಡುವುದು ಒಳ್ಳೆಯದು. ಇದಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ,” ಎಂದು ವಿಧಾಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.

ಶತಮಾನದ ಮಹಾಪ್ರಸ್ಥಾನ- ಸಂವಾದ ಕಾರ್ಯಕ್ರಮದ ಮಾಹಿತಿ ನೀಡುವ ಸಲುವಾಗಿ ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುವ ಸಂದರ್ಭ ಮಾಧ್ಯಮದವರು ನವೆಂಬರ್ 26ರ ಕ್ರಾಂತ್ರಿ ಎಂಬ ಊಹಾಪೋಹದ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಹರಿಪ್ರಸಾದ್, “ಮುಖ್ಯಮಂತ್ರಿ ಸಿದ್ದರಾಮಯ್ಯರು ಡಿ.3ರ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಪಕ್ಷದ ವಿಷಯ ಏನೇ ಇದ್ದರೂ ಅದನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ಕಾರ್ಯಕ್ರಮಕ್ಕೆ ಕೆ.ಸಿ. ವೇಣುಗೋಪಾಲ್ ಕೂಡ ಬರುತ್ತಾರೆ; ಅವರನ್ನೇ ಕೇಳಿ. ಇಲ್ಲಾಂದ್ರೆ ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ್ ಖರ್ಗೆಜೀ ಇದ್ದಾರೆ. ಅಲ್ಲಿಗೆ ಹೋಗಿ ಅವರನ್ನು ಕೇಳಿ. ಯಾರು ಉತ್ತರಿಸಬೇಕೋ ಅವರೇ ಉತ್ತರಿಸುತ್ತಾರೆ,” ಎಂದರು.

ರಾಮ್‌ಲೀಲಾ ಮೈದಾನದ ರ್ಯಾಲಿ ಕುರಿತು ಮಾತನಾಡಿದ ಅವರು, “ಡಿ.16ರಂದು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಮತ ಕಳವು ಅಥವಾ ವೋಟ್ ಚೋರಿ ವಿಚಾರದಲ್ಲಿ ದೇಶದ ಮಟ್ಟದಲ್ಲಿ ದೊಡ್ಡ ರ್ಯಾಲಿ ಆಯೋಜಿಸಲಾಗಿದೆ. ದೇಶದಾದ್ಯಂತ ಈಗಾಗಲೇ 5 ಕೋಟಿ ಸಹಿ ಸಂಗ್ರಹಿಸಲಾಗಿದೆ. ಕರ್ನಾಟಕದಲ್ಲಿ ಈಗಾಗಲೇ 1 ಕೋಟಿ 24 ಲಕ್ಷ ಸಹಿ ಸಂಗ್ರಹಿಸಿ ದೆಹಲಿಗೆ ಕಳುಹಿಸಲಾಗಿದೆ. ಎಲ್ಲ ರಾಜ್ಯಗಳಿಂದ ಸಹಿಗಳನ್ನು ಸಂಗ್ರಹಿಸಿ ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುತ್ತದೆ. ಚುನಾವಣಾ ಸಂದರ್ಭ ಎಲೆಕ್ಷನ್ ಕಮಿಷನ್ ಯಾವ ರೀತಿಯಲ್ಲಿ ತಪ್ಪು ದಾರಿ ಹಿಡಿಯುತ್ತದೆ ಎಂದು ತೋರಿಸಲು ಈ ರ್ಯಾಲಿ ನಡೆಯಲಿದೆ” ಎಂದರು.