ಮಂಗಳೂರು: ನರರೋಗ, ಮಾನಸಿಕ ಅಸ್ವಸ್ಥತೆ, ಅಲ್ಜೈಮರ್, ಪಾರ್ಶ್ವವಾಯು ಹಾಗೂ ಕ್ಯಾನ್ಸರ್ ಸೇರಿದಂತೆ ದೀರ್ಘಕಾಲೀನ ಕಾಯಿಲೆಗಳೊಂದಿಗೆ ಹೋರಾಟ ನಡೆಸುತ್ತಿರುವವರಿಗೆ ಸಹಾಯಕವಾಗುವ ಉದ್ದೇಶದಿಂದ ಕಾಸರಗೋಡಿನ ದೈಗೋಳಿಯಲ್ಲಿ ನವಚೇತನ ಕೇರ್ ಸೆಂಟರ್ ಹೊಸ ಆರೈಕೆ ಘಟಕವನ್ನು ಆರಂಭಿಸುತ್ತಿದೆ. 18 ಹಾಸಿಗೆ ಸಾಮರ್ಥ್ಯದ ಈ ವಿಶೇಷ ಆರೈಕೆ ಕೇಂದ್ರದ ಉದ್ಘಾಟನೆ ನವೆಂಬರ್ 23, 2025, ಭಾನುವಾರ ಮಧ್ಯಾಹ್ನ 2 ಗಂಟೆಗೆ ಸಾಯಿ ನಿಕೇತನ ಸೇವಾಶ್ರಮದಲ್ಲಿ ನಡೆಯಲಿದೆ ಎಂದು ನವಚೇತನ ಕೇರ್ ಸೆಂಟರ್‌ನ ಸಂಸ್ಥಾಪಕ ಹಾಗೂ ಭಟ್ ಬಯೋಟೆಕ್ ಚೇರ್‌ಮನ್ ಡಾ. ಶ್ಯಾಂ ಭಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವೇಗದ ಜೀವನಶೈಲಿ, ಕುಟುಂಬಗಳ ಆರೈಕೆ ಸವಾಲು, ಹಾಗೂ ಮನೆಯಲ್ಲಿನ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ದೀರ್ಘಕಾಲೀನ ಕಾಯಿಲೆಗಳ ನಿತ್ಯ ನಿರ್ವಹಣೆ ಕಷ್ಟಕರವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯಿಂದ ಹೊರಗೆ ಆದರೆ ಮನೆ ವಾತಾವರಣದಲ್ಲಿ, 24×7 ವೈದ್ಯಕೀಯ ಮೇಲ್ವಿಚಾರಣೆಯೊಂದಿಗೆ ಆರೈಕೆ ಒದಗಿಸುವ ವ್ಯವಸ್ಥೆ ಜನರಿಗೆ ಅಗತ್ಯವಾಗಿದೆ. ಈ ಬೇಡಿಕೆಯನ್ನು ಮನಗಂಡು ನವಚೇತನ ಕೇರ್ ಸೆಂಟರ್‌ನ್ನು ದೈಗೋಳಿಯಲ್ಲಿ ಸ್ಥಾಪಿಸುತ್ತಿದ್ದೇವೆ” ಎಂದು ಅವರು ವಿವರಿಸಿದರು.
ಈ ಕೇಂದ್ರದಲ್ಲಿ 24/7 ವೈದ್ಯಕೀಯ ಮೇಲ್ವಿಚಾರಣೆ, ಫಿಸಿಯೋಥೆರಪಿ, ವೃತ್ತಿಪರ ಥೆರಪಿ, ವೈಯಕ್ತಿಕ ಆರೈಕೆ, ಮಾನಸಿಕ ಹಾಗೂ ಭಾವನಾತ್ಮಕ ಬೆಂಬಲ, ಅಂತಹ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದರು.
ಭಾರತದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯರಲ್ಲಿ 7.4% ಮಂದಿ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, 3.69 ಮಿಲಿಯನ್ ಅಲ್ಜೈಮರ್ ರೋಗಿಗಳು, 14.6 ಲಕ್ಷ ಕ್ಯಾನ್ಸರ್ ಪೀಡಿತರು ದೇಶದಲ್ಲಿ ಇದ್ದಾರೆ ಎಂಬ ಮಾಹಿತಿಯನ್ನು ಅವರು ಹಂಚಿಕೊಂಡರು. ಇಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಕುಟುಂಬಗಳ ಮೇಲೆ ಭಾರವಾಗಬಾರದು. ಗುಣಮಟ್ಟದ ದೀರ್ಘಕಾಲೀನ ಆರೈಕೆಗೆ ಸುಲಭ ಪ್ರವೇಶ ದೊರಕುವಂತೆ ಮಾಡುವದೇ ಈ ಕೇಂದ್ರದ ಉದ್ದೇಶ” ಎಂದು ಡಾ. ಭಟ್ ಹೇಳಿದರು.

ಈ ಯೋಜನೆ ನವಚೇತನ ಕೇರ್ ಸೆಂಟರ್ ಹಾಗೂ ದೈಗೋಳಿಯ ಶ್ರೀ ಸಾಯಿ ನಿಕೇತನ ಸೇವಾಶ್ರಮದ ಸಂಯುಕ್ತ ಪ್ರಯತ್ನವಾಗಿದೆ. ಸಾಯಿ ನಿಕೇತನದ ಆಡಳಿತ ವಿಶ್ವಸ್ಥರಾದ ಡಾ. ಉದಯಕುಮಾರ್ ನೂಜಿ ಮತ್ತು ಡಾ. ಶಾರದಾ ಉದಯಕುಮಾರ್ ನಿರ್ಗತಿಕರು, ಸೌಲಭ್ಯವಂಚಿತರು, ಮಾನಸಿಕ ಅಸ್ವಸ್ಥರ ಸೇವೆಯಲ್ಲಿ ರಾಜ್ಯದಲ್ಲಿ ಹೆಸರಾಗಿದ್ದಾರೆ. ನೂರಾರು ಅನಾಥ ಮತ್ತು ಮಾನಸಿಕ ಅಸ್ವಸ್ಥರನ್ನು ಗುಣಪಡಿಸಿ, ಪುನರ್ವಸತಿ ಮಾಡಿ, ಮತ್ತೆ ತಮ್ಮ ಊರಿಗೆ ಸೇರಿಸಿರುವ ಸೇವಾ ಚರಿತ್ರೆಯನ್ನೂ ಡಾ. ಶ್ಯಾಂ ಭಟ್ ಪ್ರಶಂಸಿಸಿದರು.
ಅವರು ಅಮೇರಿಕಾದಲ್ಲಿ ಎಚ್‌ಐವಿ ಸಂಶೋಧನೆಯಲ್ಲಿ ಮಹತ್ತರ ಕೊಡುಗೆ ನೀಡಿ, ಬಳಿಕ ಭಾರತದ ಬಡಜನರಿಗೆ ಕಡಿಮೆ ವೆಚ್ಚದಲ್ಲಿ ರೋಗಪತ್ತೆ ಸಾಧನಗಳನ್ನು ಲಭ್ಯಮಾಡುವ ಉದ್ದೇಶದಿಂದ ಭಟ್ ಬಯೋಟೆಕ್ ಸಂಸ್ಥೆಯನ್ನು ಸ್ಥಾಪಿಸಿದ ವಿಚಾರವನ್ನು ಹಂಚಿಕೊಂಡರು. ಕೊರೋನಾ ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಉಚಿತವಾಗಿ ವೈದ್ಯಕೀಯ ಸಾಧನಗಳನ್ನು ಒದಗಿಸಿ ಮಾನವೀಯತೆ ಪ್ರದರ್ಶಿಸಿದ ಘಟನೆಗೂ ಸುದ್ದಿಗೋಷ್ಠಿಯಲ್ಲಿ ಅವರು ಪ್ರಸ್ತಾಪವಾಯಿತು.
ಶ್ಯಾಮ್ ಭಟ್ ಪತ್ನಿ ಶಾರದಾ ಭಟ್, ಸಿಇಒ ಪವನ್ ಕುಮಾರ್, ಪ್ರಕಾಶ್ ಇಳಂತಿಲ ಮತ್ತಿತರರು ಉಪಸ್ಥಿತರಿದ್ದರು.