ಸುಖಾನಂದ್ ಶೆಟ್ಟಿ ಹತ್ಯೆ ಪ್ರಕರಣ: 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಅರೆಸ್ಟ್


ಮಂಗಳೂರು: ಸುಖಾನಂದ್ ಶೆಟ್ಟಿ ಹತ್ಯಾ ಆರೋಪಿಗಳಿಗೆ ಮನೆಯಲ್ಲಿ ಆಶ್ರಯ ನೀಡಿ, ತಪ್ಪಿಸಿಕೊಳ್ಳಲು ನೆರವಾಗಿ, ಕಳೆದ 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮೂಲತಃ ಬಂಟ್ವಾಳದ ಅಡ್ಡೂರು ಗ್ರಾಮದ ಟಿಬೆಟ್ ಕಾಲೊನಿ ನಿವಾಸಿ, ಪ್ರಸ್ತುತ ಬಜ್ಪೆಯ ಕಿನ್ನಿಪದವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಬ್ದುಲ್ ಸಲಾಂ ಅಡ್ಡೂರು(47) ಪೊಲೀಸರು ಬಜ್ಪೆಯ ಕಿನ್ನಿಪದವು ಎಂಬಲ್ಲಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನ ಸಹೋದರ ಲತೀಫ್ @ ಅಡ್ಡೂರು ಲತೀಫ್ ಇನ್ನೂ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ.
ಸುರತ್ಕಲ್ ಪೊಲೀಸ್ ಠಾಣಾ ಸರಹದ್ದಿನ ಹೊಸಬೆಟ್ಟು ಬಳಿ ೦೧.೧೨.೨೦೦೬ ರಂದು ಸುಖಾನಂದ್ ಶೆಟ್ಟಿ ಅವರನ್ನು ಕಬೀರ್ ಹಾಗೂ ಆತನ ಸಹಚರರು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.
ಪ್ರಕರಣದ ಪ್ರಮುಖ ಆರೋಪಿ ಕಬೀರ್‌ಗೆ ಸಹೋದರರಾದ ಲತೀಫ್ @ ಅಡ್ಡೂರು ಲತೀಫ್ ಹಾಗೂ ಅಬ್ದುಲ್ ಸಲಾಂ ಸೇರಿ ತಮ್ಮ ಅಡ್ಡೂರಿನ ಟಿಬೇಟ್ ಕಾಲೋನಿಯಲ್ಲಿರುವ ಮನೆಯಲ್ಲಿ ಎರಡು ದಿನ ಆಶ್ರಯ ನೀಡಿದ್ದರು. ಅಲ್ಲದೆ ಆರೋಪಿಗಳು ಪೊಲೀಸರಿಂದ ತಪ್ಪಿಸಿ ತಲೆಮರೆಸಿಕೊಳ್ಳಲು ಸಹಕಾರ ನೀಡಿ ಈ ಪೈಕಿ ಕಬೀರ್‌ನನ್ನು ವಾಹನದಲ್ಲಿ ಕೇರಳದ ಕಾಸರಗೋಡು ಬಳಿ ಬಿಟ್ಟು ಇಬ್ಬರು ಸಹೋದರರು ಕೂಡ ತಲೆ ಮರೆಸಿಕೊಂಡಿದ್ದರು.
ಸಬ್ದುಲ್ ಸಲಾಂ ಅಡ್ಡೂರು ಕೃತ್ಯ ನಡೆದ ಮೂರು ತಿಂಗಳ ಬಳಿಕ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಅಲ್ಲಿಂದ ಈತ ಸುಮಾರು 19 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ.
ಆರೋಪಿ ಅಬ್ದುಲ್ ಸಲಾಂ ಬಜಪೆ ಠಾಣಾ ವ್ಯಾಪ್ತಿಯಲ್ಲಿ ಇರುವ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ ಪೊಲೀಸರು ೧೮.೧೧.೨೦೨೫ ರಂದು ಸಂಜೆ ೮ ಗಂಟೆ ಸುಮಾರಿಗೆ ಬಜಪೆ ಕಿನ್ನಿಪದವುಗೆ ತೆರಳಿ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ.
ಅಬ್ದುಲ್ ಸಲಾಂ ೨೦೦೭ರಲ್ಲಿ ಪಾಸ್ ಪೋರ್ಟ್ ಮಾಡಿ ಕೆಲವು ವರ್ಷಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡು ಇತ್ತೀಚಿಗೆ ವಾಪಸ್ ಊರಿಗೆ ಬಂದಿದ್ದ. ಈತನು ಅಡ್ಡೂರಿನಲ್ಲಿರುವ ತನ್ನ ಮನೆಯನ್ನು ನೆಲಸಮಗೊಳಿಸಿ ಅಲ್ಲಿಂದ ಬಜಪೆಯ ಕಿನ್ನಿಪದವಿನ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಈತನ ಸಹೋದರ ಲತೀಫ್ @ ಅಡ್ಡೂರು ಲತೀಫ್ ಇನ್ನೂ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಪೊಲೀಸರಿಂದ ಶೋಧ ನಡೆಯುತ್ತಿದೆ. ಸುಖಾನಂದ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಈ ಹಿಂದೆ ಒಟ್ಟು ೧೬ ಮಂದಿ ಆರೋಪಿಗಳನ್ನು ಬಂಧಿಸಿದ್ದು ಉಳಿದ ೧೧ ಜನ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ.
ಬಂಧಿತ ಆರೋಪಿ ಸಲಾಂ ಮೇಲೆ ಬಜಪೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು ಈತನ ಮೇಲೆ ಬಜಪೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿತ್ತು. ಈತನ ಮೇಲೆ ನ್ಯಾಯಾಲಯದಿಂದ ಹಲವಾರು ಬಾರಿ ವಾರಂಟ್‌ಗಳನ್ನು ಹೊರಡಿಸಿದ್ದರೂ ಸುಮಾರು 19 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದುದರಿಂದ ಈತನ ವಿರುದ್ಧ ಠಾಣೆಯಲ್ಲಿ ಕಲಂ ೨೦೯ ಬಿ.ಎನ್.ಎಸ್ ರಂತೆ ಪ್ರಕರಣವನ್ನು ದಾಖಲಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿ ಪತ್ತೆಯ ಬಗ್ಗೆ ಸಹಾಯಕ ಪೊಲೀಸ್ ಆಯುಕ್ತ (ಉತ್ತರ ಉಪ ವಿಭಾಗ) ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ., ಪಿ.ಎಸ್.ಐ. ರಘುನಾಯಕ್ ಹಾಗೂ ಠಾಣಾ ಸಿಬ್ಬಂದಿ ಅಣ್ಣಪ್ಪ, ಅಜಿತ್ ಮ್ಯಾಥ್ಯೂ, ರಾಜೇಂದ್ರ ಪ್ರಸಾದ್, ವಿನೋದ್ ನಾಯ್ಕ್, ಸುನಿಲ್ ಕುಸನಾಳ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದರು.

error: Content is protected !!