ನವದೆಹಲಿ: ದೆಹಲಿ ಸ್ಫೋಟ ಆರೋಪಿ ಡಾ. ಉಮರ್ ಉನ್ ನಬಿ ಅವರ ದಿನಾಂಕವಿಲ್ಲದ ವೀಡಿಯೊ ವಿರುದ್ಧ AIMIM ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.

ಆ ವಿಡಿಯೋದಲ್ಲಿ ಆತ್ಮಹತ್ಯಾ ಬಾಂಬ್ ದಾಳಿಗಳನ್ನು ಹುತಾತ್ಮತೆ ರೀತಿಯಲ್ಲಿ ಸಮರ್ಥಿಸಿಕೊಳ್ಳಲಾಗಿದೆ. ಈ ಪರಿಕಲ್ಪನೆಯನ್ನು “ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ” ಎಂದು ಓವೈಸಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಓವೈಸಿ, ಇಸ್ಲಾಂನಲ್ಲಿ ಆತ್ಮಹತ್ಯೆ “ಹರಾಮ್” (ನಿಷೇಧಿತ) ಮತ್ತು ಅಮಾಯಕರ ಹತ್ಯೆ ಗಂಭೀರ ಪಾಪ ಆಗುತ್ತದೆ. ಅಂತಹ ಕೃತ್ಯಗಳು ದೇಶದ ಕಾನೂನಿಗೆ ವಿರುದ್ಧವಾಗಿವೆ. ಅವುಗಳನ್ನು ಯಾವುದೇ ರೀತಿಯಲ್ಲಿ ತಪ್ಪಾಗಿ ಅರ್ಥ ಮಾಡಿಕೊಳ್ಳಬಾರದು. ಇದು ಭಯೋತ್ಪಾದನೆ ಅಲ್ಲದೇ ಬೇರೇನೂ ಇಲ್ಲ ಎಂದಿದ್ದಾರೆ.

ಇದಲ್ಲದೆ, ಕಳೆದ ಆರು ತಿಂಗಳಲ್ಲಿ ಯಾವುದೇ ಸ್ಥಳೀಯ ಕಾಶ್ಮೀರಿ ಭಯೋತ್ಪಾದಕ ಗುಂಪುಗಳಿಗೆ ಸೇರಿಲ್ಲ ಎಂದು ಸಂಸತ್ತಿಗೆ ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿಗೆ ಹೇಳಿದೆ ಹೇಳಿಕೆಗೆ ಜವಾಬ್ದಾರರಾಗಬೇಕು ಎಂದು ಅಸಾದುದ್ದೀನ್ ಓವೈಸಿ ಒತ್ತಾಯಿಸಿದ್ದಾರೆ.
ಆಪರೇಷನ್ ಸಿಂಧೂರ ಮತ್ತು ಮಹಾದೇವ್ ಕಾರ್ಯಾಚರಣೆ ಸಂದರ್ಭದಲ್ಲಿ ಕಳೆದ ಆರು ತಿಂಗಳಲ್ಲಿ ಯಾವುದೇ ಸ್ಥಳೀಯ ಕಾಶ್ಮೀರಿ ಭಯೋತ್ಪಾದಕ ಗುಂಪುಗಳಿಗೆ ಸೇರಿಲ್ಲ ಎಂದು ಅಮಿತ್ ಶಾ ಸಂಸತ್ತಿಗೆ ಭರವಸೆ ನೀಡಿದ್ದರು. ನಂತರ ಈ ಗುಂಪು ಎಲ್ಲಿಂದ ಬಂತು? ಈ ಗುಂಪನ್ನು ಪತ್ತೆಹಚ್ಚುವಲ್ಲಿ ವಿಫಲವಾದ ಕಾರಣಕ್ಕೆ ಯಾರು ಹೊಣೆಗಾರರು? ಎಂದು ಓವೈಸಿ ಪ್ರಶ್ನಿಸಿದ್ದಾರೆ.