ಮಂಗಳೂರು: ಸುರತ್ಕಲ್ ಜಂಕ್ಷನ್ ಬಳಿಯ ಹರ್ಷಾ ಶೋರೂಂ ಸಮೀಪ ಸಿಎನ್‌ಜಿ ಟ್ಯಾಂಕರ್‌ನಲ್ಲಿ ಸೋರಿಕೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಶುಕ್ರವಾರ(ನ.14) ರಾತ್ರಿ ಸಂಭವಿಸಿದೆ.

ಬೈಕಂಪಾಡಿಯ ಗೇಲ್ ಪಂಪ್‌ನಿಂದ ಸಿಎನ್‌ಜಿ ತುಂಬಿಸಿಕೊಂಡು ಸುರತ್ಕಲ್ ಕಡೆಗೆ ಸಾಗುತ್ತಿದ್ದ ಟ್ಯಾಂಕರ್‌ನಲ್ಲಿ ಸೋರಿಕೆಯಾಗಿದ್ದು, ಕೂಡಲೇ ಚಾಲಕ ರಾಷ್ಟ್ರೀಯ ಹೆದ್ದಾರಿಯ ಬದಿಗೆ ವಾಹನವನ್ನು ನಿಲ್ಲಿಸಿ, ಉಂಟಾದ ಅಪಾಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ, ರಾಷ್ಟ್ರೀಯ ಹೆದ್ದಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು ಮತ್ತು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಯಿತು.

ಸಿಎನ್‌ಜಿ ಅಡುಗೆ ಅನಿಲದಷ್ಟು ಅಪಾಯಕಾರಿಯಲ್ಲದಿದ್ದರೂ, ಇದು ನೈಸರ್ಗಿಕ ಅನಿಲದ ಭಾಗವಾಗಿದೆ. ಒಂದು ವೇಳೆ ದೊಡ್ಡ ಪ್ರಮಾಣದ ಬೆಂಕಿ ಅವಘಡ ಸಂಭವಿಸಿದರೆ ಸಿಲಿಂಡರ್ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಅಪಾಯಕ್ಕೆ ಅವಕಾಶ ನೀಡದೆ ತಕ್ಷಣವೇ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಯಿತು.