
ಮಂಗಳೂರು: ‘‘ಸಹ್ಯಾದ್ರಿ ಕಾಲೇಜಿನಲ್ಲಿ ನಡೆದ ಸಹಿ ಸಂಗ್ರಹ ಅಭಿಯಾನವು ಮತದಾನದ ಹಕ್ಕುಳ್ಳ ವಿದ್ಯಾರ್ಥಿಗಳಿಗೆ ಚುನಾವಣಾ ಆಯೋಗದ ನಿಷ್ಪಕ್ಷಪಾತತೆ ಹಾಗೂ ಪಾರದರ್ಶಕ ಚುನಾವಣಾ ಪ್ರಕ್ರಿಯೆಯ ಮಹತ್ವವನ್ನು ತಿಳಿಸುವ ಜನಜಾಗೃತಿ ಕಾರ್ಯಕ್ರಮವಾಗಿದ್ದು, ಇದನ್ನು ಒತ್ತಡದ ಕ್ರಮ ಎಂದು ಬಣ್ಣಿಸುವುದು ಸಂಪೂರ್ಣ ತಪ್ಪು’’ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಇತ್ತಿಚೆಗೆ ಕಾಲೇಜಿನಲ್ಲಿ ನಡೆಯುತ್ತಿರುವ ದೇಶವ್ಯಾಪಿ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ 18 ವರ್ಷ ಮೇಲ್ಪಟ್ಟ ಮತದಾರರಾಗಿರುವ ವಿದ್ಯಾರ್ಥಿಗಳಿಗೆ ಜಾಗೃತಿ ಅಭಿಯಾನ ಮಾಡಲಾಗಿತ್ತು. ‘‘ಈ ಕಾರ್ಯಕ್ರಮ ಸಂಪೂರ್ಣ ಸ್ವಯಂಪ್ರೇರಿತವಾಗಿದ್ದು, ವಿದ್ಯಾರ್ಥಿಗಳು ತಮ್ಮ ಇಚ್ಛೆಯಿಂದಲೇ ಸಹಿ ಮಾಡಿದ್ದಾರೆ. ಯಾರ ಮೇಲೂ ಯಾವುದೇ ರೀತಿಯ ಒತ್ತಡ ಹೇರಲಾಗಿದೆ ಎಂಬ ಆರೋಪ ನಾವು ತಿಳಿದಿರುವಂತೆ ನಿರಾಧಾರ’’ ಎಂದು ಅವರು ಹೇಳಿದರು.
“ಸಹ್ಯಾದ್ರಿ ಕಾಲೇಜಿನ ಆಡಳಿತ ಮಂಡಳಿಯ ಅದ್ಯಕ್ಷರು ಹಾಗೂ ಶಾಸಕರಾದ ಡಾ. ಮಂಜುನಾಥ ಭಂಡಾರಿವರು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿದ್ದಾರೆ ಎನ್ನುವುದು BJP ಯುವ ಮೋರ್ಚಾದ ರಾಜಕೀಯ ಪ್ರೇರಿತ, ಅರ್ಥಹೀನ ಹಾಗೂ ಆತಂಕ ಸೃಷ್ಟಿಸಲು ಹೊರಟ ಸುಳ್ಳುಪ್ರಚಾರ’’ ಎಂದು ಶ್ರೀ ಶೆಟ್ಟಿ ಆರೋಪವನ್ನು ತಳ್ಳಿ ಹಾಕಿದರು.
ಅವರು ಮುಂದುವರಿಸಿ, ‘‘ಈ ಅಭಿಯಾನದ ಉದ್ದೇಶ ಚುನಾವಣಾ ಆಯೋಗವು ನಿಷ್ಪಕ್ಷಪಾತ, ಪಾರದರ್ಶಕ ಮತ್ತು ನ್ಯಾಯಯುತ ಚುನಾವಣೆ ನಡೆಸಬೇಕೆಂಬ ಸಂದೇಶವನ್ನು ಮತದಾನದ ಹಕ್ಕುಳ್ಳ ವಿದ್ಯಾರ್ಥಿಗಳ ನಡುವೆ ಹರಡುವುದಷ್ಟೇ. ಇದು ಯಾವುದೇ ಪಕ್ಷಪಾತದ ಅಥವಾ ಒತ್ತಾಯದ ಕ್ರಮವಲ್ಲ’’ ಎಂದು ಹೇಳಿದರು.
RSS–BJPಗೆ ಸೇರಿದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಚುನಾವಣಾ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಹೇಗೆ ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತದೆ ಎಂಬುದು ಕರಾವಳಿಗೆ ಹೊಸದಲ್ಲ ಎಂದು ಟೀಕಿಸಿದ ಅವರು, ‘‘ಇಂತಹ ಸಂಸ್ಥೆಗಳೇ ಇಂದು ನೈತಿಕತೆ ಬಗ್ಗೆ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಓದಿದಂತಾಗಿದೆ ಎಂದರು.
ದಕ್ಷಿಣ ಕನ್ನಡದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಸೇವೆ ಸಲ್ಲಿಸಿ, ಶುದ್ಧಹಸ್ತ, ಶಿಸ್ತುಬದ್ದ ಮತ್ತು ಬದ್ಧತೆಯ ನಾಯಕನಾಗಿರುವ ಡಾ. ಮಂಜುನಾಥ ಭಂಡಾರಿಯವರ ಮೇಲಿನ ಆರೋಪ ವಿರೋಧಿಗಳಿಗೆ ತಮ್ಮ ಅಜ್ಞಾನವನ್ನು ಬಿಚ್ಚಿಡುವಂತದ್ದಾಗಿದೆ ಎಂದು ಅವರು ಖಂಡಿಸಿದರು.