ಬೆಳ್ತಂಗಡಿ: ಮಾಲಾಡಿ ಪ್ರದೇಶದಲ್ಲಿ ಯಾರೂ ಇಲ್ಲದ ಮನೆಗೆ ನುಗ್ಗಿ ಕಳ್ಳತನ ಮಾಡಲು ಯತ್ನಿಸಿದ ಕುಖ್ಯಾತ ಆರೋಪಿಯನ್ನು ಸ್ಥಳೀಯರು ಚಾಕಚಕ್ಯದಿಂದ ಹಿಡಿದು ಪೂಂಜಾಲಕಟ್ಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತನನ್ನು ತಲಪಾಡಿ ನಿವಾಸಿ ಕಿರಣ್ ಎಂದು ಗುರುತಿಸಲಾಗಿದೆ.

ಮಾಲಾಡಿಯ ಪ್ರೇಮಾ ಶೆಟ್ಟಿ ಎಂಬವರ ಮನೆ ಕಳೆದ ಕೆಲ ಕಾಲದಿಂದ ಬೀಗ ಹಾಕಲಾಗಿತ್ತು. ನವೆಂಬರ್ 9ರಂದು ಬೆಳಿಗ್ಗೆ ಅವರ ಮಗಳು ಸಿಸಿಟಿವಿಯಲ್ಲಿ ಅಪರಿಚಿತ ವ್ಯಕ್ತಿ ಮನೆಗೆ ನುಗ್ಗಲು ಯತ್ನಿಸುತ್ತಿರುವುದು ಗಮನಿಸಿದ್ದು, ತಕ್ಷಣ ನೆರೆಹೊರೆಯ ಪ್ರಕಾಶ್ ಶೆಟ್ಟಿ ಅವರಿಗೆ ಮಾಹಿತಿ ನೀಡಿದರು.
ಪ್ರಕಾಶ್ ಶೆಟ್ಟಿ ಸ್ಥಳಕ್ಕೆ ಧಾವಿಸಿದಾಗ ಕಬ್ಬಿಣದ ರಾಡ್ ಹಿಡಿದಿದ್ದ ಕಳ್ಳನನ್ನು ಎದುರಿಸಿದರು. ಕಿರಣ್ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸ್ಥಳೀಯರ ಸಹಕಾರದಿಂದ ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಯಿತು. ಈತನ ವಿರುದ್ಧ ಕರ್ನಾಟಕ ಮತ್ತು ಕೇರಳ ರಾಜ್ಯಗಳ ವಿವಿಧ ಠಾಣೆಗಳಲ್ಲಿ ಒಟ್ಟು 13 ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದು, ಇತರ ಪ್ರಕರಣಗಳ ಸಂಬಂಧ ತನಿಖೆ ಮುಂದುವರೆಸಿದ್ದಾರೆ.
