ಸಿದ್ದರಾಮಯ್ಯ ಪರ ಬಸನಗೌಡ ಪಾಟೀಲ್ ಯತ್ನಾಳ್ ಬ್ಯಾಟಿಂಗ್

ಗದಗ: ಪ್ರಸ್ತುತ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿದರೆ ಒಳ್ಳೆಯದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭಾನುವಾರ ಹೇಳಿದ್ದಾರೆ.

ಡಿ ಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರ ಮೌನ ಮತ್ತು ಅವರ ಉದ್ದೇಶಗಳ ಬಗ್ಗೆ ಯಾವುದೇ ಸ್ಪಷ್ಟತೆಗಳಿಲ್ಲ. ಸಿಎಂ ರಾಜಣ್ಣ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ರಾಜಣ್ಣ ಅವರ ಬಣ ಡಿಕೆ.ಶಿವಕುಮಾರ್ ಅವರ ಮೇಲೆ ಆರೋಪ ಹೊರಿಸುತ್ತಿದೆ. ಪಕ್ಷದ ಸದಸ್ಯರಲ್ಲಿ ಸ್ಪಷ್ಟ ಗೊಂದಲವಿದೆ, ಪಕ್ಷ ವಿಭಜನೆಯಾಗುವ ಆತಂಕವಿದೆ ಎಂದು ಹೇಳಿದರು.

ಇದೇ ವೇಳೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ವಿವಾದ ಕುರಿತು ಮಾತನಾಡಿದ ಅವರು, “ಯಾವುದೇ ಸರ್ಕಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿಲ್ಲ. ಪ್ರಸ್ತುತ, ಜೈಲುಗಳು ಭಯೋತ್ಪಾದಕರ ಆಶ್ರಯ ತಾಣಗಳಾಗಿವೆ. ನಮ್ಮ ಆಡಳಿತದ ಅವಧಿಯಲ್ಲಿಯೂ ಕೈದಿಗಳು ಮೊಬೈಲ್’ಗಳನ್ನು ಬಳಸುವುದು ಪತ್ತೆಯಾಗಿತ್ತು. ಈ ಕುರಿತು ಸಮಗ್ರ ತನಿಖೆ ಅಗತ್ಯವಿದೆ, ಕಾರಾಗೃಹದಲ್ಲಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕೈದಿಗಳು ಅಥವಾ ಕಾನೂನು ಉಲ್ಲಂಘಿಸುವವರು ಜೈಲುಗಳಲ್ಲಿ ಸೌಕರ್ಯವನ್ನು ಕಂಡುಕೊಂಡರೆ, ಬಿಡುಗಡೆಯಾದ ನಂತರ ಮತ್ತೆ ಕಾನೂನು ಉಲ್ಲಂಘಿಸುವ ಸಾಧ್ಯತೆಯಿದೆ ಎಂದು ತಿಳಿಸಿದರು.

ರೈತರ ಪ್ರತಿಭಟನೆ ಕುರಿತು ಮಾತನಾಡಿ, ಕಬ್ಬಿನ ಬೆಲೆ ನಿಗದಿಗೆ ಸಂಬಂಧಿಸಿದಂತೆ ಸರ್ಕಾರವು ವ್ಯವಸ್ಥಿತವಾಗಿ ರೈತರನ್ನು ವಂಚಿಸಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಬ್ಬು ಬೆಳೆಗಾರರು 2018 ರಿಂದ ಬಾಕಿ ಪಾವತಿಗಳನ್ನು ಇನ್ನೂ ಸ್ವೀಕರಿಸಿಲ್ಲ ಎಂದು ಕಿಡಿಕಾರಿದರು.

ಈ ನಡುವೆ ಗದಗಕ್ಕೆ ಯತ್ನಾಳ್ ಅವರು ಭೇಟಿ ನೀಡುತ್ತಿದ್ದಂತೆಯೇ ಅವರ ಬೆಂಬಲಿಗರು ಮುಂದಿನ ಸಿಎಂ ಯತ್ನಾಳ್ ಎಂದು ಘೋಷಣೆಗಳನ್ನು ಕೂಗಿದರು. ಅನೇಕ ಸಭಿಕರು ಯತ್ನಾಳ್ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಭಾವನೆಗಳನ್ನು ವ್ಯಕ್ತಪಡಿಸಿದರು.

 

error: Content is protected !!