ಮಂಗಳೂರು: ಸುಧೀರ್ ಅತ್ತಾವರ್ ನಿರ್ದೇಶನದ “ಕೊರಗಜ್ಜ” ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಸಿನಿಮಾ ಜನರಲ್ಲಿ ಬಿಡುಗಡೆಗೂ ಮುನ್ನವೇ ಹುಟ್ಟಿಸುತ್ತಿರುವ ಕ್ರೇಜ್ ಅಷ್ಟಿಷ್ಟಲ್ಲ. ಚಿತ್ರದ ಧನಾತ್ಮಕ ಜನಪ್ರಿಯತೆಯ ಬಗ್ಗೆ ರಾಜ್ಯದ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಹರ್ಷ ವ್ಯಕ್ತಪಡಿಸಿದರು.

ನಶಿಸಿ ಹೋಗುತ್ತಿರುವ ನಮ್ಮ ಪುರಾತನ ಸಂಸ್ಕ್ರತಿ ಹಾಗೂ ಕಲೆಯನ್ನು “ಕೊರಗಜ್ಜ” ರೀತಿಯ ಸಿನಿಮಾಗಳು ಎತ್ತಿಹಿಡಿಯುತ್ತಿರುವುದು ಸಂತೋಷ ನೀಡುತ್ತಿದೆ. ಈ ರೀತಿಯ ಚಿತ್ರಗಳು ಹೆಚ್ಚು ಹೆಚ್ಚು ಮೂಡಿಬರಲಿ ಎಂದು ಆಶಿಸಿ, ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿ ತಾಯಾರಾಗಿರುವ “ಕೊರಗಜ್ಜ” ಚಿತ್ರಕ್ಕೆ ಶುಭ ಹಾರೈಸಿದರು.

ನವಂಬರ್ 11ರಂದು ಸಿನಿಮಾ ತಾರೆಯರ ಸಮ್ಮುಖದಲ್ಲಿ ನಡೆಯಲಿರುವ ಕೊರಗಜ್ಜ ದೈವದ ಅದ್ದೂರಿ ಕೋಲಸೇವೆಯ ಬಗ್ಗೆ ರಾಜ್ಯದ ಗೃಹ ಸಚಿವರೊಂದಿಗೆ ಚಿತ್ರತಂಡ ಚರ್ಚಿಸಿತು. ಕೆಲ ಸ್ಥಳಿಯ ಕಿಡಿಕೇಡಿಗಳು ನೀಡುತ್ತಿರುವ ಬೆದರಿಕೆ ಮತ್ತು ಚಿತ್ರೀಕರಣದ ವೇಳೆ ನಡೆದ ದಾಳಿಗಳ ಹಿನ್ನೆಲೆಯಲ್ಲಿ ಗೃಹಸಚಿವ ಡಾ. ಜಿ.ಪರಮೇಶ್ ರವರೊಂದಿಗೆ ನಿರ್ದೇಶಕ ಸುಧೀರ್ ಅತ್ತಾವರ್, ಚಿತ್ರದ ಪ್ರಮುಖ ನಟಿ ಭವ್ಯ, ನಿರ್ಮಾಪಕ ತ್ರಿವಿಕ್ರಮ್, ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಚರ್ಚಿಸಿ ವಿಶೇಷ ಭದ್ರತೆಯ ಬಗ್ಗೆ ಮನವಿ ಮಾಡಿಕೊಂಡರು.
ಇತ್ತೀಚೆಗಷ್ಟೇ ಅತ್ಯಂತ ವಿಭಿನ್ನ ರೀತಿಯಲ್ಲಿ ಚಿತ್ರದ ಫಸ್ಟ್ ಲುಕ್ ಮತ್ತು 3ಡಿ ಮೋಷನ್ ಪೋಸ್ಟರ್ ಬಿಡುಗಡೆ ಗೊಳಿಸಿ ಚಿತ್ರದ ಮೇಲಿನ ನಿರೀಕ್ಷೆ ಇಮ್ಮಡಿಗೊಳಿಸಿದೆ.