ಕೊಡಗು: ಭುಜ ನೋವು ಎಂದು ಆಸ್ಪತ್ರೆಗೆ ಹೋಗಿದ್ದ ಯುವಕ ಎರಡು ಇಂಜೆಕ್ಷನ್ ಮತ್ತು ಮಾತ್ರೆ ಪಡೆದ ಬಳಿಕ ತೀವ್ರ ಅಸ್ವಸ್ಥನಾಗಿ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಗ್ರಾಮದಲ್ಲಿ ಸಂಭವಿಸಿದೆ.

ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಗ್ರಾಮದ ನಿವಾಸಿ ವಿನೋದ್ (28) ಮೃತ ಯುವಕ.
ವಿನೋದ್ ಭುಜದ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆ ಪಡೆಯಲೆಂದು ಸುಂಟಿಕೊಪ್ಪದಲ್ಲೇ ಇರುವ ಖಾಸಗಿ ಕ್ಲಿನಿಕ್ಗೆ ತೆರಳಿದ್ದಾರೆ. ಇವರನ್ನು ಪರೀಕ್ಷಿಸಿದ ವೈದ್ಯ ಯಶೋಧರ್ ಪೂಜಾರಿ ಮಾತ್ರೆ ಜೊತೆಗೆ ಇಂಜೆಕ್ಷನ್ ಕೂಡ ನೀಡಿದ್ದಾರೆ. ಆದರೂ ನೋವು ಕಡಿಮೆಯಾಗದ ಕಾರಣ ಮತ್ತೊಂದು ಇಂಜೆಕ್ಷನ್ ಕೊಟ್ಟು ಮನೆಗೆ ಕಳುಹಿಸಿದ್ದಾರೆ. ಕ್ಲಿನಿಕ್ನಿಂದ ಮನೆಗೆ ಆಗಮಿಸಿದ ವಿನೋದ್ ಕೆಲವೇ ಹೊತ್ತಿನಲ್ಲಿ ಅಸ್ವಸ್ಥರಾಗಿ ಬಿದ್ದಿದ್ದು, ತಕ್ಷಣವೇ ಸ್ಥಳೀಯರು ಆಟೋದಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಅವರನ್ನು ಕರೆ ತಂದಿದ್ದಾರೆ. ಆದರೆ ಅಷ್ಟರಲ್ಲಾಗಲೇ ವಿನೋದ್ ಸಾವನ್ನಪ್ಪಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ.

ಮೃತ ವಿನೋದ್ಗೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ.ಕಳೆದ ಕೆಲವು ದಿನಗಳಿಂದ ತಮ್ಮ ಮನೆಯನ್ನ ತಾವೇ ನವೀಕರಿಸಿದ್ದರು. ಮರಗಳನ್ನ ಇಳಿಸಿದ್ದರಿಂದ ಸ್ವಲ್ಪ ಭುಜ ನೋವಿದೆ ಅಂತ ಕ್ಲಿನಿಕ್ಗೆ ತೆರಳಿದ್ದೇ ಅವರ ಜೀವಕ್ಕೀಗ ಮುಳುವಾಗಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ತಮ್ಮ ಮಗನ ಸಾವಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಘಟನೆಯ ನಂತರ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.