ಕೆಂಪುಕಲ್ಲು ರಾಜಧನ ಇಳಿಕೆಯನ್ನು ಸಮರ್ಪಕ ಜಾರಿಗೊಳಿಸಲು ಶಾಸಕ ಮಂಜುನಾಥ ಭಂಡಾರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ವಿಚಾರಕ್ಕೆ ಸಂಬಂಧಿಸಿ ಸರಕಾರದ ರಾಜಧನ ಇಳಿಕೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ನೇತೃತ್ವದಲ್ಲಿ ಕೆಂಪು ಕಲ್ಲು ಗಣಿ ಮಾಡುವವರು, ಉದ್ಯಮಿಗಳು, ಕಂಟ್ರಾಕ್ಟುದಾರರ ಸಭೆ ನಡೆಸಿ ದರ ಇಳಿಕೆ ಮಾಡಲು ಅಗತ್ಯ ಕ್ರಮ ವಹಿಸುವ ಕುರಿತು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ವ್ಯಾಪಕವಾಗಿ ಬಳಸುವ ಕೆಂಪುಕಲ್ಲಿನ ದುಬಾರಿ ದರದ ಕುರಿತು ಕರ್ನಾಟಕ ಸರಕಾರ ಗಣಿಗಾರಿಕೆ ಮೇಲೆ ವಿಧಿಸಿದ ರಾಜಧನವನ್ನು ಶೇ.58.82ರಷ್ಟು ಇಳಿಕೆ ಮಾಡಿದರೂ ಕೆಂಪುಕಲ್ಲು ದರ ಮಾತ್ರ ದುಬಾರಿಯಾಗಿಯೇ ಉಳಿದಿದೆ. ಈ ಮೊದಲು 30 ರೂಪಾಯಿ ಇದ್ದ ಕಲ್ಲಿನ ದರ ಈಗ ರಾಜಸ್ವ ಹೆಸರಿನಲ್ಲಿ ಕೆಂಪುಕಲ್ಲು ಗಣಿಗಾರಿಕೆ ಉಧ್ಯಮಿಗಳು ಒಂದು ಕೆಂಪು ಕಲ್ಲಿಗೆ 50-55 ರೂ. ವಸೂಲಿ ಮಾಡುತ್ತಿದ್ದು, ಇದು ಬಡವರು, ಮಧ್ಯಮ ವರ್ಗ, ಉದ್ಯಮಿಗಳ ಪಾಲಿಗೆ ದುಬಾರಿಯಾಗಿ ಪರಿಣಮಿಸಿದೆ.
ಈ ಹಿಂದೆ ರಾಜ್ಯ ಸರಕಾರ ಗಣಿಗಾರಿಕೆ ಮೇಲೆ ವಿಧಿಸಿದ ಹೊಸ ತೆರಿಗೆಯಿಂದ ಗಣಿ ಉದ್ಯಮ ಕಂಗಾಲಾಗಿದ್ದು, ಮರಳುಗಾರಿಕೆ, ಕೆಂಪುಕಲ್ಲು ಗಣಿಗಾರಿಕೆ. ಜಲ್ಲಿ ಕ್ರಷರ್ ಉದ್ಯಮ ಸ್ತಬ್ಧವಾಗಿತ್ತು. ಇದರಿಂದ ಮನೆ ನಿರ್ಮಾಣ, ವಸತಿ ಸಂಕೀರ್ಣ, ಕಟ್ಟಡ ಉದ್ಯಮ ವಲಯ ಸಂಕಷ್ಟಕ್ಕೆ ಸಿಲುಕಿತ್ತು. ಇದರ ವಿರುದ್ಧ ಉದ್ಯಮಿಗಳು, ಕಾಂಟ್ಯಾಕ್ಟ್ ದಾರರು, ಜನಪ್ರತಿನಿಧಿಗಳು ಬೀದಿಗಿಳಿದು ರಾಜಧನ ಇಳಿಸುವಂತೆ ಪ್ರತಿಭಟನೆ ನಡೆಸಿದ್ದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಂಕಿ-ಸಂಖ್ಯೆ ಪ್ರಕಾರ ಹಿಂದೆ 10 ಟನ್ (ಅಂದಾಜು 400 ಕೆಂಪುಕಲ್ಲು) ಕೆಂಪುಕಲ್ಲಿಗೆ 50 ರೂ. ರಾಯಲ್ಟಿ ಕಟ್ಟಬೇಕಾಗಿತ್ತು. ಈ ದರ 120 ರೂ.ವರೆಗೂ ಏರಿಕೆಯಾಗಿತ್ತು. ಆದರೆ ರಾಜ್ಯ ಸರಕಾರ ಹೊಸ ಆದೇಶ ಹೊರಡಿಸಿ ರಾಯಲ್ಟಿ 700 ರೂ., ಡಿಎಂಎಫ್ 70 ರೂ., ಎಪಿ 280 ರೂ.. 2ಡಿ-1,050 ರೂ. ಸೇರಿದಂತೆ 10 ಟನ್ ಕೆಂಪು ಕಲ್ಲಿಗೆ ಒಟ್ಟು 2,564 ರೂ. ರಾಜಧನ ಕಟ್ಟಲು ಆದೇಶ ಮಾಡಿತ್ತು.
ರಾಜಧನದ ಈ ಕ್ರಮ ಖಂಡಿಸಿ ಗಣಿ ಉದ್ಯಮಿಗಳು ಗಣಿಗಾರಿಕೆ ಸ್ಥಗಿತಗೊಳಿಸಿ ಪ್ರತಿಭಟಿಸಿದ್ದರು. ಅದಕ್ಕೆ ತಕ್ಕಂತೆ ಜಿಲ್ಲಾಡಳಿತವೂ ಅಕ್ರಮವಾಗಿ ನಡೆಸುತ್ತಿರುವ ಗಣಿಗಾರಿಕೆ, ಕೆಂಪುಕಲ್ಲು ಸಾಗಾಟ ವಿರುದ್ಧ ಕಠಿಣ ಕ್ರಮ ಕೈಗೊಂಡು ಕರಾವಳಿಯಲ್ಲಿ ಗಣಿಗಾರಿಕೆ ಸ್ಥಗಿತಗೊಂಡು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿತ್ತು.
ಈ ಹಿನ್ನಲೆಯಲ್ಲಿ ಕರ್ನಾಟಕ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್, ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಗಣಿ ಇಲಾಖೆ ಮುಖ್ಯ ಕಾರ್ಯದರ್ಶಿಗಳ ಮುಂದಾಳತ್ವದಲ್ಲಿ ಸಿವಿಲ್ ಕಾಂಟ್ಯಾಕ್ಸ್ ದಾರರ ಸಂಘ, ಗಣಿ ಉದ್ಯಮಿಗಳು, ಕ್ರೆಡೈ ಪದಾಧಿಕಾರಿಗಳ ಸಭೆ ನಡೆಸಿ, ರಾಜಸ್ವ ಇಳಿಕೆ ಬಗ್ಗೆ ಸಹಮತಕ್ಕೆ ಬಂದು ರಾಜಧನವನ್ನು ಇಳಿಸಲು ಕ್ರಮ ವಹಿಸಲಾಗಿತ್ತು.
ರಾಜ್ಯ ಸರಕಾರ ರಾಜಸ್ವಧನವನ್ನು ಶೇ.58.80ರಷ್ಟು ಇಳಿಕೆ ಮಾಡಿದರೂ ಗಣಿ ಉದ್ಯಮಿಗಳು ರಾಜಸ್ವ ಏರಿಕೆ ನೆಪದಲ್ಲಿದರ ಇಳಿಸದೆ ಹಿಂದಿನಂತೆ ವಸೂಲಿ ಮಾಡುತ್ತಿದ್ದಾರೆ. ಪ್ರತೀ ಕೆಂಪು ಕಲ್ಲಿನ ದರ 50-55 ರೂ.ಗೆ ಏರಿಕೆ ಮಾಡಿದ್ದು, 10 ಟನ್ ಕೆಂಪುಕಲ್ಲಿಗೆ 18ರಿಂದ 20 ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ. ಇದರಲ್ಲಿ ಸರಕಾರಕ್ಕೆ ಸಂದಾಯವಾಗುತ್ತಿರುವುದು ಕೇವಲ 920 ರೂ. ಮಾತ್ರ. ರಾಜ್ಯ ಸರಕಾರ ಕೆಂಪುಕಲ್ಲಿನ ರಾಜಧನವನ್ನು 920 ರೂ.ಗೆ ಇಳಿಸಿದ ಮೇಲೂ ಕೆಂಪುಕಲ್ಲು ಗಣಿಗಾರಿಕೆ ನಡೆಸುವವರು ಕಲ್ಲಿನ ದರವನ್ನು ಇಳಿಸದಿರುವ ಬಗ್ಗೆ ದೂರುಗಳು ಬರುತ್ತಿದ್ದು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲೆ ಹಿರಿಯ ಭೂ ವಿಜ್ಞಾನಿ ಹಾಗೂ ಗಣಿ ಇಲಾಖೆ ಅಧಿಕಾರಿ ಹೇಳುತ್ತಿದ್ದರೂ ಯಾವುದೇ ಕ್ರಮ ಜರುಗಿಸುತ್ತಿಲ್ಲ.
ಪ್ರಸ್ತುತ ಕಲ್ಲಿನ ದರದಲ್ಲಿ 1,200 ಚದರಡಿ ವಿಸ್ತೀರ್ಣದ ಮನೆಗೆ ಅಂದಾಜು ಸುಮಾರು 3 ಲಕ್ಷದವರೆಗೆ ಹೆಚ್ಚಳವಾಗುತ್ತದೆ. ಈ ದರದಲ್ಲಿ ಮನೆ ನಿರ್ಮಾಣ ಕಾಮಗಾರಿ ಸಾಧ್ಯವಿಲ್ಲ ಹಾಗೂ ದರ ಏರಿಕೆ ಮಾಡಿದರೆ ಜನಸಾಮಾನ್ಯರಿಗೆ ಮನೆ ಕಟ್ಟಲು ಸಮಸ್ಯೆಯಾಗಲಿದೆ ಎಂದು ದ.ಕ. ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್‌ ಅಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಮೇಲಿನ ಎಲ್ಲಾ ಅಂಶಗಳನ್ನು ಮಾಹಿತಿ ಸಹಿತ ಜಿಲ್ಲಾಧಿಕಾರಿ ಅವರಿಗೆ ವಿವರಿಸಲಾಗಿದೆ. ಗಣಿ ಉದ್ಯಮಿಗಳು ರಾಜ್ಯ ಸರಕಾರ ಕೆಂಪುಕಲ್ಲಿನ ರಾಜಧನವನ್ನು 920 ರೂ.ಗೆ ಇಳಿಸಿದ ಮೇಲೂ ಕಲ್ಲಿನ ದರ ಇಳಿಸದ ಕಾರಣ ಬಡವರು, ಮಧ್ಯಮ ವರ್ಗ, ಕಟ್ಟಡ ಉದ್ಯಮಿಗಳು, ಕಾಂಟ್ಯಾಕ್ಸ್ ದಾರರು ಕಂಗಾಲಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ರಾಜಧನ ಹೆಸರಲ್ಲಿ ಕೆಂಪುಕಲ್ಲು ದರವನ್ನು ಅವೈಜ್ಞಾನಿಕವಾಗಿ ಏರಿಸಿರುವುದರ ಬಗ್ಗೆ ಪರಿಶೀಲನೆ ನಡೆಸಬೇಕು. ಸರಕಾರದ ರಾಜಧನಕ್ಕೆ ತಕ್ಕಂತೆ ಕೆಂಪುಕಲ್ಲುದರ ಇಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಇದೇ ಸಂದರ್ಭದಲ್ಲಿ ಮನವಿ ಮಾಡಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ, ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ವಿಧಾನ ಪರಿಷತ್ ಉಪಚುನಾವಣೆ ಅಭ್ಯರ್ಥಿ ರಾಜ ಪೂಜಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿರಣ್ ಬಡ್ಲೆಗುತ್ತು ಉಪಸ್ಥಿತರಿದ್ದರು.

error: Content is protected !!