ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಇದೀಗ ಮತ್ತೊಮ್ಮೆ ರಾಜ್ಯ ಮಹಿಳಾ ಆಯೋಗ ಈಗ ಅಧಿಕೃತವಾಗಿ ಎಂಟ್ರಿಯಾಗಿದೆ.

ಆಯೋಗವು ಎಸ್‌ಐಟಿ ತನಿಖೆಯ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಮಹಿಳೆಯರ ಮೇಲಿನ ಅತ್ಯಾಚಾರ, ನಾಪತ್ತೆ ಪ್ರಕರಣಗಳ ತನಿಖೆಯ ಕುರಿತಂತೆ ಸ್ಪಷ್ಟ ಮಾಹಿತಿಯನ್ನು ನೀಡುವಂತೆ ಪತ್ರದ ಮೂಲಕ ಮನವಿ ಮಾಡಿದೆ.
ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಬರೆದ ಪತ್ರದಲ್ಲಿ, ಎಸ್‌ಐಟಿ ತನಿಖೆ ಕೇವಲ ʻಚಿನ್ನಯ್ಯʼ ಎಂಬ ವ್ಯಕ್ತಿಯ ಹೇಳಿಕೆಯನ್ನು ಆಧರಿಸಿ ನಡೆದಿರುವುದನ್ನು ಉಲ್ಲೇಖಿಸಿದ್ದಾರೆ. ಮಾನವ ಕಳೇಬರಗಳ ಉತ್ಖನನ ನಡೆದರೂ, ಸಾವಿನ ನಿಖರ ಕಾರಣ, ಮಹಿಳೆಯರ ಅಸ್ಥಿಪಂಜರಗಳ ಗುರುತು ಹಾಗೂ ಕಾಡಿನ ಪ್ರದೇಶದಲ್ಲಿ ಶವಗಳು ದೊರಕಲು ಕಾರಣಗಳ ಬಗ್ಗೆ ತನಿಖೆ ಪೂರ್ಣವಾಗಿಲ್ಲ ಎಂದು ಆಯೋಗವು ಸೂಚಿಸಿದೆ.

ಇದೇ ಪತ್ರದಲ್ಲಿ, ಎಸ್‌ಐಟಿಗೆ ಮಹಿಳೆಯರು ಮತ್ತು ಯುವತಿಯರ ನಾಪತ್ತೆ, ಅತ್ಯಾಚಾರ, ಕೊಲೆ ಹಾಗೂ ಅನುಮಾನಾಸ್ಪದ ಸಾವುಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಕೋರಲಾಗಿದೆ. ಇದರ ಮಧ್ಯೆ, ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣವನ್ನು ರದ್ದುಗೊಳಿಸುವ ಮನವಿಗೆ ಸಂಬಂಧಿಸಿದಂತೆ ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ನಾಲ್ವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಹೈಕೋರ್ಟ್‌ನ ನ್ಯಾಯಮೂರ್ತಿ ಮಹಮ್ಮದ್ ನವಾಜ್ ಅವರ ನೇತೃತ್ವದ ಏಕಸದಸ್ಯ ಪೀಠದಲ್ಲಿ ನಡೆದಿದೆ.
ವಾದ–ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ನವೆಂಬರ್ 12ರವರೆಗೆ ತನಿಖೆಗೆ ತಾತ್ಕಾಲಿಕ ತಡೆ ನೀಡಿದೆ. ಒಟ್ಟಿನಲ್ಲಿ, ಧರ್ಮಸ್ಥಳ ಪ್ರಕರಣ ಮತ್ತೊಮ್ಮೆ ರಾಜ್ಯ ರಾಜಕೀಯ ಮತ್ತು ಕಾನೂನು ವಲಯದಲ್ಲಿ ಚರ್ಚೆಯ ಕೇಂದ್ರವಾಗಿದ್ದು, ಮಹಿಳಾ ಆಯೋಗದ ಹಸ್ತಕ್ಷೇಪದಿಂದ ತನಿಖೆಗೆ ಹೊಸ ದಿಕ್ಕು ಸಿಕ್ಕಿದೆ.