ಬೆಂಗಳೂರು: ವೈದ್ಯಕೀಯ ವಲಯವನ್ನೇ ಬೆಚ್ಚಿಬೀಳಿಸಿರುವ ಪತ್ನಿ ಹತ್ಯೆ ಪ್ರಕರಣದಲ್ಲಿ ಸರ್ಜನ್ ಬಂಧನಕ್ಕೊಳಗಾಗಿದ್ದಾನೆ. ಈತ ತನ್ನ ಚರ್ಮರೋಗ ತಜ್ಞೆ ಪತ್ನಿಯನ್ನು ಕೊಂದ ಕೆಲವೇ ಗಂಟೆಗಳಲ್ಲಿ ತನ್ನ ಪ್ರೇಮಿಗೆ “ನಾನು ನಿನಗಾಗಿ ನನ್ನ ಹೆಂಡತಿಯನ್ನು ಕೊಂದೆ(‘Killed My Wife For You’)” ಎಂದು ಸಂದೇಶ ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ತನಿಖೆಯ ಪ್ರಕಾರ, ಬಂಧಿತ ಡಾ. ಮಹೇಂದ್ರ ರೆಡ್ಡಿ, ವೃತ್ತಿಯಲ್ಲಿ ಜನರಲ್ ಸರ್ಜನ್. ಮೃತ ಡಾ. ಕೃತಿಕಾ ರೆಡ್ಡಿ ಖ್ಯಾತ ಚರ್ಮರೋಗ ತಜ್ಞೆ. ಇವರು ಇಬ್ಬರೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ 26, 2024 ರಂದು ವಿವಾಹವಾಗಿದ್ದು, ಪತ್ನಿಗೆ ಖಾಯಿಲೆ ಇರುವ ವಿಷಯ ತಿಳಿದು ಆಕೆಯನ್ನು ಕೊಲ್ಲುವ ನಿರ್ಧಾರಕ್ಕೆ ಬಂದಿದ್ದಾಗಿ ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದಾರೆ.
ಈ ವರ್ಷದ ಏಪ್ರಿಲ್ 21 ರಂದು ಕೃತಿಕಾ ಮನೆಯಲ್ಲಿ ಅಸ್ವಸ್ಥರಾದರು. ಪತಿ ಮಹೇಂದ್ರ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ, ಅಲ್ಲಿ ಆಕೆ ಮೃತಪಟ್ಟರು. ಆರಂಭದಲ್ಲಿ ಇದು ನೈಸರ್ಗಿಕ ಸಾವು ಎಂದು ತೋರುತ್ತಿತ್ತು. ಆದರೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದು ಚಿತ್ರವೇ ಬದಲಾಗಿದೆ.
ಎಫ್‌ಎಸ್‌ಎಲ್ ವರದಿ ಪ್ರಕಾರ, ಕೃತಿಕಾ ಅವರ ಅಂಗಾಂಗಗಳಲ್ಲಿ ಶಸ್ತ್ರಚಿಕಿತ್ಸೆ ವೇಳೆ ಮಾತ್ರ ಬಳಸುವ ಪ್ರಬಲ ಅರಿವಳಿಕೆ ಔಷಧ “ಪ್ರೊಪೋಫೋಲ್” ಪತ್ತೆಯಾಗಿತ್ತು. ಇದರಿಂದ ಇದು ನೈಸರ್ಗಿಕ ಸಾವು ಅಲ್ಲ, ಕೊನೆ ಎನ್ನುವ ಸಂಶಯ ಮೂಡಿತ್ತು. ಮೃತ ವೈದ್ಯೆಯ ಮನೆಯಲ್ಲಿ ನಡೆದ ಶೋಧದಲ್ಲಿ ಪೊಲೀಸರು ಕ್ಯಾನುಲಾ ಸೆಟ್ ಇಂಜೆಕ್ಷನ್ ಟ್ಯೂಬ್ ಸೇರಿದಂತೆ ವೈದ್ಯಕೀಯ ಉಪಕರಣಗಳು ವಶಪಡಿಸಿಕೊಂಡಿದ್ದರು.

ಡಿಜಿಟಲ್ ಸಾಕ್ಷ್ಯ ಬಯಲು:
ತನಿಖೆಯ ವೇಳೆ ಮಹೇಂದ್ರ ರೆಡ್ಡಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ, ಡಿಜಿಟಲ್ ಪಾವತಿ ಆಪ್‌ನಲ್ಲಿ “ನಾನು ನನ್ನ ಹೆಂಡತಿಯನ್ನು ನಿನಗಾಗಿ ಕೊಂದೆ” ಎಂಬ ಸಂದೇಶ ಸಿಕ್ಕಿದೆ. ಸಂದೇಶ ಸ್ವೀಕರಿಸಿದ ಮಹಿಳೆಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಅವಳ ಹೇಳಿಕೆ ದಾಖಲಿಸಲಾಗಿದೆ. ಮಹಿಳೆಯ ಗುರುತು ಇನ್ನೂ ಬಹಿರಂಗಗೊಂಡಿಲ್ಲ.
“ಇಲ್ಲಿಯವರೆಗೆ ಸಂಗ್ರಹಿಸಿದ ಪುರಾವೆಗಳಲ್ಲಿ ಹತ್ಯೆಯಲ್ಲಿ ಪತಿಯ ನೇರ ಪಾತ್ರವನ್ನು ಸೂಚಿಸುತ್ತವೆ. ಅವನು ವೈದ್ಯಕೀಯ ಜ್ಞಾನವನ್ನು ದುರುಪಯೋಗ ಮಾಡಿಕೊಂಡು, ಪತ್ನಿಯ ಸಾವನ್ನು ನೈಸರ್ಗಿಕ ಎಂದು ತೋರಿಸಲು ಪ್ರಯತ್ನಿಸಿದ್ದಾನೆ” ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಕೃತಿಕಾ ಅವರ ತಂದೆ ತಮ್ಮ ಅಳಿಯ ವಿರುದ್ಧ ಕೊಲೆ ಆರೋಪ ಮಾಡಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಅಕ್ಟೋಬರ್ 15, 2025 ರಂದು ಮಹೇಂದ್ರ ರೆಡ್ಡಿಯನ್ನು ಬಂಧಿಸಿದ್ದಾರೆ.